ADVERTISEMENT

ಹುಲಸೂರ: ದುರಸ್ತಿ ಮಾಡಿ ವಾರ ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ

​ಪ್ರಜಾವಾಣಿ ವಾರ್ತೆ
Published 17 ಮೇ 2024, 6:12 IST
Last Updated 17 ಮೇ 2024, 6:12 IST
ಹಾಳಾಗಿರುವ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ
ಹಾಳಾಗಿರುವ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ   

ಹುಲಸೂರ: ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ ಮೊದಲೇ ಮತ್ತೆ ಹದಗೆಟ್ಟಿದ್ದು. ಕಳಪೆ ಕಾಮಗಾರಿ ಆಗಿದ್ದರಿಂದ ಹಾಳಾಗಿದೆ ಎಂದು ಜನರು ದೂರಿದ್ದಾರೆ.

ಕಳೆದ ವಾರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಎಲ್ಲೆಲ್ಲಿ ರಸ್ತೆ ಹಾಳಾಗಿದೆ ಎಂಬುದನ್ನು ಪರಿಶೀಲಿಸಿದರು. ಅದರ ಬೆನ್ನಲ್ಲೇ ರಸ್ತೆ ಸುಧಾರಣೆ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಮತ್ತೆ ರಸ್ತೆ ಅದೇ ಸ್ಥಿತಿಗೆ ತಲುಪಿದ್ದು ಅಧಿಕಾರಿಗಳ ಎದುರೇ ಇಂತಹ ಕೆಲಸ ಮಾಡಿದರೆ ಹೇಗೆ ಎಂಬುದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಮುಖ್ಯರಸ್ತೆ ಸಂಪೂರ್ಣ ಕಿತ್ತು ಹೋಗಿದರಿಂದ, ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡುವಾಗ ಅನೇಕ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಜೀಪ್, ಟಂಟಂಗಳು ಸಾಗುತ್ತವೆ.

ADVERTISEMENT

’ತಗ್ಗು ಬಿದ್ದಿರುವ ರಸ್ತೆ ಸುಧಾರಣೆ ಮಾಡುವಲ್ಲಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ವಾಹನ ಮಾಲೀಕರು ಆರೋಪಿದ್ದು, ಕೂಡಲೇ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದರಿಂದ ದೂರದ ಬೇರೆ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಸಾಕಷ್ಟು ಸಲ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ದ್ವಿಚಕ್ರ ವಾಹನದ ಮೇಲೆ ಸಂಚರಿಸುವ ಮಹಿಳೆಯರು, ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.
ಗುಲಾಂ ಬಡಾಯಿ, ಸಾಮಾಜಿಕ ಕಾರ್ಯಕರ್ತ
ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿರುವುದು ನೋಡಿದ್ದೇವೆ. ಆದರೆ, ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಇದ್ದರೂ ಕಳಪೆ ಕಾಮಗಾರಿ ಮಾಡಿರುವುದು ನಿಜಕ್ಕೂ ಬೇಸರ ತಂದಿದೆ
ನಾಗರಾಜ ಕೊರೆ, ಯುವ ಉದ್ಯಮಿ
ರಸ್ತೆ ಹದಗೆಟ್ಟಿದ್ದು ನಿಜ. ದುರಸ್ತಿ ಕಾಮಗಾರಿ ಮಾಡಲಾಗಿದೆ. ಹೆಚ್ಚಿನ ತೂಕದ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿದ್ದರಿಂದ ರಸ್ತೆ ಮತ್ತೆ ಹದಗೆಟ್ಟಿದೆ. ಇಂತಹ ವಾಹನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಧನರಾಜ ಚವ್ಹಾಣ್, ಎಇಇ, ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.