ADVERTISEMENT

ಲಿಂಗಾಯತ ಧರ್ಮ ತಿರಸ್ಕರಿಸಿದಾಗ ನಡೆಯದ ಹೋರಾಟ: ನಾಗಮೋಹನದಾಸ್ ಬೇಸರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 13:27 IST
Last Updated 23 ನವೆಂಬರ್ 2024, 13:27 IST
<div class="paragraphs"><p> ನ್ಯಾ.ಎಚ್.ಎನ್. ನಾಗಮೋಹನದಾಸ್</p></div>

ನ್ಯಾ.ಎಚ್.ಎನ್. ನಾಗಮೋಹನದಾಸ್

   

ಬಸವಕಲ್ಯಾಣ (ಬೀದರ್ ಜಿಲ್ಲೆ): `ಲಿಂಗಾಯತ ಧರ್ಮ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆ ಮಾಡಿಸುವ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದಾಗ ಎಲ್ಲರೂ ಸುಮ್ಮನಾದರು. ಒಬ್ಬರೂ ಹೋರಾಟಕ್ಕೆ ಮುಂದಾಗಲಿಲ್ಲ' ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 45 ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ `ಲಿಂಗಾಯತ ಹೋರಾಟ: ಮುಂದೇನು?' ಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

`ನನ್ನ ನೇತೃತ್ವದಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವ ಸಂಬಂಧ ಆಯೋಗ ರಚನೆ ಆಗಿತ್ತು. ಈ ಸಂಬಂಧ ವಿಸ್ತೃತ ವರದಿ ಸಲ್ಲಿಸಿದಾಗ ರಾಜ್ಯ ಸರ್ಕಾರ ಒಪ್ಪಿಕೊಂಡು ಅನುಮೋದನೆಗಾಗಿ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಕೇಂದ್ರದವರು ಕ್ಷುಲ್ಲಕ ಕಾರಣ ನೀಡಿ ಅದನ್ನು ತಿರಸ್ಕರಿಸಿದರು. ಲಿಂಗಾಯತ ಧರ್ಮ ಮಾನ್ಯತೆ ನೀಡಲು ಆಗ್ರಹಿಸಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಲಕ್ಷಾಂತರ ಜನರಿಂದ ರ್ಯಾಲಿಗಳನ್ನು ನಡೆಸಲಾಯಿತು. ಆದರೆ, ಅದನ್ನು ತಿರಸ್ಕರಿಸಿದಾಗ ಮಾತ್ರ ಜನರಲ್ಲಿ ಆ ಕಿಚ್ಚು ಕಾಣಲಿಲ್ಲ. ಕೈಕಟ್ಟಿಕೊಂಡು ಮೌನವಹಿಸಿ ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ' ಎಂದರು.

`ಧರ್ಮ ಮಾನ್ಯತೆಗೆ ಹೋರಾಟ ಅತ್ಯಗತ್ಯ. ಅಂತರಂಗವನ್ನು ಗಟ್ಟಿಗೊಳಿಸಿ ಇದಕ್ಕಾಗಿ ಚಳವಳಿ ಕೈಗೊಳ್ಳುವುದಕ್ಕೆ ಪಣ ತೊಡಬೇಕು. ಆಗ ಜಯ ಸಿಗುವುದು ನಿಶ್ಚಿತ. ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿಯಿಂದಲೇ ಹೋರಾಟ ಆರಂಭ ಆಗಲಿ. ಭಾರತದ ಸಂವಿಧಾನದಲ್ಲಿ ವಚನಗಳ ಆಶಯವಿದೆ. ಸಂವಿಧಾನಒಪ್ಪುವವರೆಲ್ಲರೂ ಬಸವತತ್ವ ಅನುಯಾಯಿಗಳೇ ಆಗಿದ್ದಾರೆ. ತತ್ವದ ಪಾಲನೆಯೇ ಬೇರೆ, ಧರ್ಮಾಚರಣೆಯೇ ಬೇರೆ. ಧರ್ಮಾಚರಣೆಗೆ ಬಲವಂತ ಮಾಡುವುದು ಸರಿಯಲ್ಲ' ಎಂದೂ ಅವರು ಹೇಳಿದ್ದಾರೆ.

ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, `ಮಠಾಧೀಶರ ದ್ವಂದ ನಿಲುವೇ ಹೋರಾಟ ಸ್ಥಗಿತಗೊಳ್ಳುವುದಕ್ಕೆ ಕಾರಣವಾಗಿದೆ. ಹಾನಗಲ್ ಕುಮಾರೇಶ್ವರ ಆಶ್ರಮದಲ್ಲಿ ವೇದ, ಆಗಮ, ಪುರಾಣಗಳ ಅಧ್ಯಯನಕ್ಕೆ ಮಹತ್ವವಿದೆ. ಅಲ್ಲಿ ತಯಾರಾದ ಸ್ವಾಮಿಗಳಿಂದ ಬಸವತತ್ವಾಚರಣೆ ಸಾಧ್ಯವಿಲ್ಲ. ಲಿಂಗಾಯತದಲ್ಲಿ ಸನ್ಯಾಸಕ್ಕೆ ಮಹತ್ವವಿಲ್ಲ. ಲಿಂಗಾಯತ ಮಠಾಧೀಶರು ಶಿಕ್ಷಣ, ದಾಸೋಹ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ. ಅದರಂತೆ ಧರ್ಮ ಮಾನ್ಯತೆ ದೊರಕಿಸುವುದಕ್ಕೂ ಮುಂದಾಳತ್ವ ವಹಿಸಬೇಕು' ಎಂದು ಕೇಳಿಕೊಂಡರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, `ಲಿಂಗಾಯತರಿಗೆ ಅಲ್ಪಸಂಖ್ಯಾತರ ಮಾನ್ಯತೆ ಬೇಕಾಗಿದೆ ಎಂಬ ವಿಷಯ ಮುಂದೆ ಮಾಡಿಕೊಂಡು ಕಾನೂನಿನ ಮೂಲಕ ಪ್ರಯತ್ನಿಸಬೇಕು. ಮಠಾಧೀಶರು ಇದರ ನೇತೃತ್ವ ವಹಿಸಬೇಕು. ಜನ ಚಳವಳಿಗೆ ಮಣಿಯದವರು ಯಾರೂ ಇಲ್ಲ. ಯಾವುದೇ ಪಕ್ಷವಿದ್ದರೂ ಜನಸಾಗರದ ಎದುರಲ್ಲಿ ಖಂಡಿತ ತಲೆ ಬಾಗುತ್ತದೆ' ಎಂದರು.

ಉಪನ್ಯಾಸಕ ಆನಂದ ಕರ್ಣೆ, ವೈಜನಾಥ ಸಜ್ಜನಶೆಟ್ಟಿ ಮಾತನಾಡಿದರು. ಶೀಲಾದೇವಿ ವೈಜನಾಥ ಭೈರಪ್ಪ, ಶೋಭಾ ಬದೋಲೆ, ಸಚಿನ ಪರಬ್, ಶಿವಕುಮಾರ ಸ್ವಾಮಿ, ವೀರೇಂದ್ರ ಮಂಗಲಗೆ, ಸಚಿನ ಸಂಗಶೆಟ್ಟಿ, ಪ್ರದೀಪ ಬುರಾಂಡೆ, ಅಭಿಷೇಕ ಮಿಠಾರೆ, ಯಶ ಅಂಬೋಳೆ, ಸುದರ್ಶನ ಮನೋಹರ ಅವರನ್ನು ಸನ್ಮಾನಿಸಲಾಯಿತು.

ಬಸವ ಮಹಾಮನೆಯ ಸಿದ್ಧರಾಮ ಸ್ವಾಮೀಜಿ, ಬೇಲೂರು ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ, ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಗೋರಟಾ ಪ್ರಭುದೇವ ಸ್ವಾಮೀಜಿ, ಗುಣತೀರ್ಥ ಕಲ್ಯಾಣ ಮಹಾಮನೆ ಬಸವಪ್ರಭು ಸ್ವಾಮೀಜಿ, ಕಾಖಂಡಕಿ ಶಿವಯೋಗೇಶ್ವರ ಸ್ವಾಮೀಜಿ, ಉಸ್ತೂರಿ ಕೋರಣೇಶ್ವರ ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು ಉಪಸ್ಥಿತರಿದ್ದರು.

ಸಿದ್ರಾಮಯ್ಯ ಸ್ವಾಮಿ ಗೋರಟಾ, ರಾಜಕುಮಾರ ಹೂಗಾರ ಮದಕಟ್ಟಿ, ರಾಮಚಂದ್ರ ಕಲ್ಲಹಿಪ್ಪರ್ಗಾ ಇವರಿಂದ ಸಂಗೀತ ಪ್ರಸ್ತುತಪಡಿಸಲಾಯಿತು. ಬಸವರಾಜ ಬಳ್ಳಾರಿ ಅವರು ಸ್ತ್ರೀವೇಶದಲ್ಲಿ ಪ್ರದರ್ಶಿಸಿದ ಕುಚಪುಡಿ ನೃತ್ಯ ಗಮನಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.