ADVERTISEMENT

ಹುಮನಾಬಾದ್: ಹಳಿಖೇಡ್ ಬಿ. ಪಟ್ಟಣದಲ್ಲಿ ಮರಿಚೀಕೆಯಾದ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 5:10 IST
Last Updated 1 ಜುಲೈ 2024, 5:10 IST
ಹಳಿಖೇಡ್ ಬಿ. ಪಟ್ಟಣದ ಬಡಾವಣೆಯೊಂದರ ಅಂಗನವಾಡಿ ಎದುರುಗಡೆ ನೀರು ಸಂಗ್ರಹಗೊಂಡಿರುವುದು
ಹಳಿಖೇಡ್ ಬಿ. ಪಟ್ಟಣದ ಬಡಾವಣೆಯೊಂದರ ಅಂಗನವಾಡಿ ಎದುರುಗಡೆ ನೀರು ಸಂಗ್ರಹಗೊಂಡಿರುವುದು   

ಹುಮನಾಬಾದ್: ತಾಲ್ಲೂಕಿನ ಹಳಿಖೇಡ್‌ ಬಿ. ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರೂ ಕಸದ ರಾಶಿ ಸಂಗ್ರಹಗೊಂಡು ಗಬ್ಬು ನಾರುತ್ತಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. 

ಪಟ್ಟಣದಲ್ಲಿ ಒಟ್ಟು 23 ವಾರ್ಡ್‌ಗಳಿವೆ. 23 ಸದಸ್ಯರಿದ್ದಾರೆ. ಮುಖ್ಯಾಧಿಕಾರಿಗಳಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ  ನೈರ್ಮಲ್ಯ ಕಾಪಾಡುವ ಸಲುವಾಗಿಯೇ ಅಧಿಕಾರಿಗಳಿದ್ದಾರೆ. ಪೌರ ಕಾರ್ಮಿಕರಿದ್ದಾರೆ. ಇಷ್ಟೆಲ್ಲ ಇದ್ದರೂ ಪಟ್ಟಣದಲ್ಲಿ ಸ್ವಚ್ಛತೆ ಎಂಬುದನ್ನು ಹುಡುಕುವಂತಾಗಿದೆ.

ಸಾಂಕ್ರಾಮಿಕ ರೋಗದ ಭೀತಿ: ಪಟ್ಟಣದಲ್ಲಿನ ಚರಂಡಿಗಳು ಸಂಪೂರ್ಣ ಹದಗೆಟ್ಟಿವೆ. ಅನೇಕ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿವೆ . ಇರುವ ಚರಂಡಿಗಳನ್ನು ವರ್ಷಕ್ಕೊಮ್ಮೆಯಾದರೂ ಪುರಸಭೆ ಸ್ವಚ್ಛಗೊಳಿಸುತ್ತಿಲ್ಲ. ಚರಂಡಿಗಳು ತುಂಬಿ ದುರ್ನಾತ ಬೀರುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಅಂಗನವಾಡಿ ಎದುರುಗಡೆ ದುಸ್ಥಿತಿ: ಪಟ್ಟಣದ ಬಡಾವಣೆಯೊಂದರಲ್ಲಿ ಸರ್ಕಾರಿ ಅಂಗನವಾಡಿ ಶಾಲೆಯ ಎದುರುಗಡೆ ಮಳೆ ನೀರು ಸಂಗ್ರಹಗೊಂಡು ಓಡಾಡಲು ಬರದಂತಾಗಿದೆ. ಮಳೆ ಬಂದರೆ ಸಾಕು ನೀರು ನಿಂತು ಗಬ್ಬು ನಾರುತ್ತಿದೆ. ಇದರಿಂದ ಅಂಗನವಾಡಿಯ  ಮಕ್ಕಳಿಗೆ ಓಡಾಡಲು ಬಾರದೆ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟವರು ಅಂಗನವಾಡಿ ಎದುರುಗಡೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಅಂಗನವಾಡಿ ಶಾಲೆಯ ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಶೌಲಚಾಯ ಕೊರತೆ: ಪಟ್ಟಣದಲ್ಲಿ ಶೌಚಾಲಯದ ಸಮಸ್ಯೆ ಬಹುದಿನಗಳಿಂದ ಇದ್ದು 3-4 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಬಳಕೆ ಬಾರದ ಸ್ಥಿತಿಯಲ್ಲಿ ಇವೆ. ಇವುಗಳ ನಿರ್ವಹಣೆ ಪುರಸಭೆ ಜವಾಬ್ಧಾರಿ ವಹಿಸಿದರೂ ಸ್ವಚ್ಛತೆಗೆ ಮುಂದಾಗಿಲ್ಲ.

ಹಲವು ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಬಯಲು ಶೌಚಕ್ಕೆ ಮೊರೆ ಹೋಗುವಂತಾಗಿದೆ.

ಹಳಿಖೇಡ್ ಬಿ. ಪಟ್ಟಣದ ಬಡಾವಣೆಯೊಂದರ ಅಂಗನವಾಡಿ ಎದುರುಗಡೆ ನೀರು ಸಂಗ್ರಹಗೊಂಡಿರುವುದು
ಪಟ್ಟಣದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ಎಲ್ಲಿ ನೋಡಿದರೂ ಗಬ್ಬು ನಾರುತ್ತಿದೆ ‌ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು.
ಪ್ರಕಾಶ್ ನಿವಾಸಿ
ಈಗಾಗಲೇ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಚರಂಡಿ ಸ್ವಚ್ಛತೆ ಮಾಡಲಾಗುತ್ತಿದೆ. ಸಾರ್ವಜನಿಕರು ಸಹ ತಮ್ಮ ಮನೆ ಕಸ ತಂದು ರಸ್ತೆಯ ಮೇಲೆ ಎಸೆಯಬಾರದು‌. ಇನ್ನುಳಿದ ಚರಂಡಿಗಳನ್ನೂ ಸ್ವಚ್ಛ ಮಾಡಲಾಗುವುದು.
ಅಶೋಕ್ ಚನ್ನಕೋಟೆ ಪುರಸಭೆ ಮುಖ್ಯಾಧಿಕಾರಿ ಹಳಿಖೇಡ್ ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.