ಬೀದರ್: ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37ರಿಂದ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಸುಳಿದಾಡುತ್ತಿದೆ. ಒಂದು ಕ್ಷಣ ವಿದ್ಯುತ್ ಕೈಕೊಟ್ಟರೆ ಸೆಕೆಯಿಂದ ನರಕಯಾತನೆ ಅನುಭವಿಸುವ ಸ್ಥಿತಿ ಇದೆ. ಕಚೇರಿ, ಮಾರುಕಟ್ಟೆ ಹಾಗೂ ಶಿಕ್ಷಣ ಸಂಸ್ಥೆ ಹೀಗೆ ಹಲವು ಕಾರಣಗಳಿಗಾಗಿ ಜನ ಮನೆಗಳಿಂದ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಇದೆ. ಮನೆಯಿಂದ ಹೊರಗೆ ಹೋದವರು ಬಾಯಾರಿಕೆ ನೀಗಿಸಿಕೊಳ್ಳಲು ರಸ್ತೆ ಬದಿಗೆ ಇರುವ ಕೈಗಾಡಿಗಳಲ್ಲಿ ಪಾನೀಯ ಸೇವಿಸಿ ತೊಂದರೆ ಅನುಭವಿಸುತ್ತಿದ್ದಾರೆ.
ಬೇಸಿಗೆ ಕಾರಣ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಅನೇಕ ಕಡೆ ತಂಪು ಪಾನೀಯ ಮಾರಾಟ ಅಂಗಡಿಗಳು ತೆರೆದುಕೊಂಡಿವೆ. ಲಿಂಬೆ ಶರಬತ್, ಪಾನಕಾ, ಹಣ್ಣಿನ ಫ್ಲೇವರ್ಇರುವ ಜ್ಯೂಸ್, ಐಸ್ ಗೋಲಾ, ಲಸ್ಸಿ ಹಾಗೂ ಕಬ್ಬಿನ ರಸದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡದ ಕಾರಣ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಜಿಲ್ಲೆಯಲ್ಲಿ ಸಾರ್ವಜನಿಕರು ಸೇವಿಸಬಹುದಾದ ಮಂಜುಗಡ್ಡೆ ಉತ್ಪಾದಿಸುವ ಒಂದು ಘಟಕವೂ ಇಲ್ಲ. ವಾಣಿಜ್ಯ ಬಳಕೆಗೆ ಅಗತ್ಯವಿರುವ ಮಂಜುಗಡ್ಡೆ ತಯಾರಿಸುವ ನಾಲ್ಕು ಫ್ಯಾಕ್ಟರಿಗಳು ಬೀದರ್ ನಗರದಲ್ಲಿ ಇವೆ. ಒಂದು ನೌಬಾದ್ ಕೈಗಾರಿಕೆ ಪ್ರದೇಶದಲ್ಲಿದ್ದರೆ, ಮೂರು ಗಾಂಧಿ ಗಂಜ್‌ನಲ್ಲಿ ಇವೆ. ಈ ಮಂಜುಗಡ್ಡೆಯನ್ನು ಮೀನು ಹಾಗೂ ಮಾಂಸ ಸಾಗಣೆಗೆ ಬಳಸಲಾಗುತ್ತದೆ.
ರಸ್ತೆ ಬದಿಗೆ ಐಸ್‌ಗೋಲಾ ಮಾರಾಟ ಮಾಡುವವರು ಇಲ್ಲಿಂದಲೇ ಮಂಜುಗಡ್ಡೆ ಖರೀದಿಸಿ ಐಸ್‌ಗೋಲಾ ಮಾಡಿ ಮಾರಾಟ ಮಾಡುತ್ತಿದ್ದಾರೆ. ಐಸ್ ಫ್ಯಾಕ್ಟರಿಗಳಲ್ಲಿ ಬಳಸಲಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಆದರೆ, ವ್ಯಾಪಾರಸ್ಥರು ಇದನ್ನೇ ಯಂತ್ರದ ಮೇಲೆ ತಿಕ್ಕಿ ಸಕ್ಕರೆ ಅಂಶದ ಬಣ್ಣ ಹಾಕಿ ಮಕ್ಕಳಿಗೆ ಮಾರಾಟ ಮಾಡುತ್ತಿದ್ದಾರೆ.
ಕಬ್ಬಿನ ರಸದ ಅಂಗಡಿಗಳಲ್ಲಿ ಅಂಗಡಿ ಮಾಲೀಕರು ಯಂತ್ರಕ್ಕೆ ಹಾಕುವ ಮೊದಲು ಕಬ್ಬನ್ನುತೊಳೆಯುತ್ತಿಲ್ಲ. ನೊಣಗಳು ಗಟಾರ, ಸಗಣಿ ಮೇಲೆ ಕುಳಿತು ಹಾರಾಡಿಕೊಂಡು ಮತ್ತೆ ಕಬ್ಬಿನ ಮೇಲೆ ಕುಳಿತುಕೊಳ್ಳುತ್ತಿವೆ. ಅಂಗಡಿಯವರು ಅದೇ ಕಬ್ಬನ್ನು ನುರಿಸಿ ಜ್ಯೂಸ್ ಮಾಡಿಕೊಡುತ್ತಿದ್ದಾರೆ. ನೈರ್ಮಲ್ಯ ಕೊರತೆ ಎದ್ದು ಕಾಣುತ್ತಿದ್ದು, ಜ್ಯೂಸ್ ಸೇವಿಸುವವರಿಗೆ ಅಪಾಯ ಕಾದಿದೆ.
ವಿವಿಧ ಹಣ್ಣುಗಳ ಫ್ಲೇವರ್ಜ್ಯೂಸ್ ಮಾರಾಟ ಮಾಡುತ್ತಿರುವ ಅಂಗಡಿಗಳಲ್ಲಿ ಗ್ಲಾಸ್‌ಗಳನ್ನು ಸರಿಯಾಗಿ ತೊಳೆಯುತ್ತಿಲ್ಲ. ಗ್ರಾಹಕರು ಜ್ಯೂಸ್ ಸೇವಿಸಿ ಹೋದ ನಂತರ ಒಂದು ಬಕೆಟ್‌ನಲ್ಲಿ ಮುಳುಗಿಸಿ ಬೇರೊಬ್ಬ ಗ್ರಾಹಕರಿಗೆ ಅದೇ ಗ್ಲಾಸ್‌ನಲ್ಲಿ ಜ್ಯೂಸ್ ಹಾಕಿ ಕೊಡುತ್ತಿದ್ದಾರೆ. ಇದರಿಂದ ಕೆಲವರಲ್ಲಿ ವಾಂತಿ– ಬೇಧಿಯೂ ಕಾಣಿಸಿಕೊಳ್ಕುತ್ತಿದೆ.
‘ಗೋಲಗಪ್ಪೆ ಹಾಗೂ ಪಾನಿಪುರಿ ಸಾರ್ವಜನಿಕರಿಗೆ ಹೆಚ್ಚು ಅಪಾಯ ತಂದೊಡ್ಡುತ್ತಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂತಹ ಅಂಗಡಿಗಳ ಮಾಲೀಕರಿಗೆ ನೈರ್ಮಲ್ಯ ತಿಳಿವಳಿಕೆ ನೀಡುವ ಕರಪತ್ರಗಳನ್ನು ಹಂಚಬೇಕು. ಜನರ ಸ್ವಾಸ್ಥ್ಯ ಕಾಪಾಡಲು ನೆರವಾಗಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ದತ್ತಾತ್ರಿ ಮೂಲಗೆ.
‘ಸಾರ್ವಜನಿಕರು ಸೇವಿಸಲು ಬಳಸಬಹುದಾದ ಮಂಜುಗಡ್ಡೆ ಉತ್ಪಾದಿಸುವ ಒಂದು ಫ್ಯಾಕ್ಟರಿಯೂ ಜಿಲ್ಲೆಯಲ್ಲಿ ಇಲ್ಲ. ಪ್ರಸ್ತುತ ಜಿಲ್ಲೆಯಲ್ಲಿರುವ ಎಲ್ಲ ಐಸ್ ಫ್ಯಾಕ್ಟರಿಗಳು ವಾಣಿಜ್ಯ ಬಳಕೆಯ ಮಂಜುಗಡ್ಡೆ ಉತ್ಪಾದಿಸುತ್ತಿವೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪತ್ರಾಂಕಿತ ಅಧಿಕಾರಿ ಡಾ.ನಿತಿನ್ ಬಿರಾದಾರ ಹೇಳುತ್ತಾರೆ.
‘ಕುಡಿಯುವ ನೀರು, ತಂಪು ಪಾನೀಯ, ಸಿದ್ಧ ಆಹಾರ, ಬೇಕರಿ ತಿನಿಸುಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಅಂಶಗಳು ಹಾಗೂ ಕಲಬೆರಿಕೆ ವಸ್ತುಗಳು ಪತ್ತೆಯಾದರೆ ಉತ್ಪಾದಕರು, ಸಾಗಣೆ, ದಾಸ್ತಾನುದಾರರು, ಸಗಟು, ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸುತ್ತಾರೆ.
* * *
ಫ್ರಿಡ್ಜ್‌ನಲ್ಲಿಟ್ಟ ನೀರು ಸೇವಿಸಬೇಡಿ
ಬೀದರ್: ಕೂಲ್‌ಡ್ರೀಂಕ್ಸ್ ಆರೋಗ್ಯಕ್ಕೆ ಒಳ್ಳೆಯಲ್ಲ. ಮನೆಯಲ್ಲಿ ಮಣ್ಣಿನ ಮಡಿಕೆ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಲಾದ ನೀರು ದೇಹಕ್ಕೆ ಉತ್ತಮ. ದೇಹಕ್ಕೆ ತಂಪು ನೀಡುವ ಸರಳವಾದ ಆಹಾರ ಸೇವಿಸಬೇಕು ಎಂದು ಬೀದರ್‌ನ ತಾಯಿ ಮತ್ತು ಮಕ್ಕಳ ನೂರು ಹಾಸಿಗೆಗಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೋಹೆಲ್ ಸಲಹೆ ನೀಡುತ್ತಾರೆ.
ರೆಫ್ರಿಜಿರೇಟರ್‌ನಲ್ಲಿಟ್ಟ ನೀರು ದೇಹಕ್ಕೆ ಒಳ್ಳೆಯದಲ್ಲ. ಅತಿ ತಣ್ಣಗಿರುವ ನೀರು ಕುಡಿಯುವುದರಿಂದ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ತಲೆ ನೋವು ಶುರುವಾಗುತ್ತದೆ. ಹಲ್ಲಿಗೆ ತಣ್ಣನೆಯ ಪದಾರ್ಥ ತಾಗಿ ನರಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಜೀರ್ಣಶಕ್ತಿಯನ್ನು ದುರ್ಬಲಗೊಳಿಸಿ ಮಲಬದ್ಧತೆಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
* * *
ಯಾವ ಪಾನೀಯ ಒಳ್ಳೆಯದು
ದೇಹವನ್ನು ತಂಪು ಹಾಗೂ ಸರಿಯಾಗಿಡಲು ಎಳನೀರು ಉತ್ತಮ. ಕಾರಣ ಎಲ್ಲ ಅಗತ್ಯ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿದೆ. ದೇಹವನ್ನು ತಂಪಾಗಿಸುತ್ತದೆ ಎಂದು ಡಾ.ಅನಿಲ ಚಿಂತಾಮಣಿ ಸಲಹೆ ಕೊಡುತ್ತಾರೆ.
ಬೇಸಿಗೆಯಲ್ಲಿ ಮೊಸರು ತಿನ್ನಲು ರುಚಿಕರ ಮಾತ್ರವಲ್ಲ, ದೇಹವನ್ನು ತಂಪಾಗಿಸುತ್ತದೆ. ಮನೆಯಲ್ಲೇ ಮಜ್ಜಿಗೆ ಅಥವಾ ಸಿಹಿ ಲಸ್ಸಿ ಮಾಡಿ ಕುಡಿಯಬಹುದು. ನಿಂಬೆ ಪಾನಕದಿಂದ ದಿನದ ಶುಭಾರಂಭ ಮಾಡುವುದು ಹೆಚ್ಚು ಒಳಿತು. ಒಂದು ಗ್ಲಾಸ್ ನಿಂಬೆ ಪಾನಕವು ದೇಹಕ್ಕೆ ಹಲವು ವಿಧಗಳಲ್ಲಿ ಲಾಭ ಕೊಡುತ್ತದೆ. ಪಾನಕಕ್ಕೆ ಉಪ್ಪು, ಚಿಟಿಕೆ ಜೀರಿಗೆ ಪುಡಿಯನ್ನು ಕೂಡ ಸೇರಿಸಬಹುದು. ಇದರಿಂದ ದೇಹ ಕ್ರಿಯಾಶೀಲವಾಗಿರುತ್ತದೆ ಎಂದು ಹೇಳುತ್ತಾರೆ.
ಕಲ್ಲಂಗಡಿಯಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಕಣ್ಣುಗಳು ಮತ್ತು ಹೃದಯಕ್ಕೆ ಒಳ್ಳೆಯದು. ದೇಹದಲ್ಲಿನ ರಕ್ತದ ಕೊರತೆಯನ್ನೂ ಹೋಗಲಾಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿವರಿಸುತ್ತಾರೆ.
* * *
ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ
ಹುಮನಾಬಾದ್: ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿದ ಕಾರಣ ಪಟ್ಟಣದ ಅಂಬೇಡ್ಕರ್ ವೃತ್ತ, ಶಿವಚಂದ್ರ, ಬಸವೇಶ್ವರ ವೃತ್ತ ಹಾಗೂ ನ್ಯಾಯಾಲಯ ಎದುರುಗಡೆಯಲ್ಲಿ ಕಲ್ಲಂಗಡಿ, ನಿಂಬು ಶರಬತ್, ಕಬ್ಬಿನ ರಸ ತೆಗೆದು ಮಾರಾಟ ಮಾಡಲಾಗುತ್ತಿದೆ.
ನಿತ್ಯ ಹಣ್ಣಿನ ಶರಬತ್ ಮಾರಾಟ ಮಾಡಿ 400 ರಿಂದ 500 ಆದಾಯ ಪಡೆಯತ್ತಿದ್ದೇನೆ ಎಂದು ಬೀದಿ ಬದಿ ವ್ಯಾಪಾರಿ ಸುನೀಲ ಹೇಳುತ್ತಾರೆ.
***
ಸಹಕಾರ:ಮನ್ಮಥ ಸ್ವಾಮಿ, ಮಾಣಿಕ ಭೂರೆ, ಗುಂಡೂ ಅತಿವಾಳ, ಬಸವಕುಮಾರ, ಗಿರಿರಾಜ ವಾಲೆ, ಬಸವರಾಜ ಪ್ರಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.