ಜನವಾಡ: ರಾಜ್ಯದಲ್ಲಿ ಹೊರಗಿನವರ ಆಟ ನಡೆಯುವುದಿಲ್ಲ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.
ಹೊರಗಿನವರು ಹಿಂದಿನಿಂದಲೂ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಆದರೆ, ಈವರೆಗೆ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿಲ್ಲ ಎಂದು ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ)ದ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಕೇಂದ್ರಕ್ಕೆ ಸಂಬಂಧಿಸಿದ್ದು. ರಾಜ್ಯಕ್ಕಲ್ಲ. ಇದು ದಕ್ಷಿಣ ಭಾರತ. ಇಲ್ಲಿಯ ವಾತಾವರಣವೇ ಬೇರೆ. ಇಲ್ಲಿಯ ಜನ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ. ಜೆಡಿಎಸ್‍ಗೆ ಬಹುಮತ ನೀಡುತ್ತಾರೆ ಎಂದು ಹೇಳಿದರು.
ಎರಡು ರಾಷ್ಟ್ರೀಯ ಪಕ್ಷಗಳು ನಾಡಿನ ಜನತೆಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಹಿಂದೆ ಕಾಂಗ್ರೆಸ್ ಐದು ವರ್ಷ ಆಡಳಿತ ನಡೆಸಿತ್ತು. ಬಿಜೆಪಿ ನಾಲ್ಕು ವರ್ಷ ಆಡಳಿತ ನಡೆಸಿದೆ. ಎರಡೂ ಪಕ್ಷಗಳಿಂದ ನಾಡಿನ ಬಡವರು, ರೈತರು ಬೇಸತ್ತಿದ್ದಾರೆ ಎಂದು ದೂರಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೇವು. ಈಗ ಪ್ರಣಾಳಿಕೆಯಲ್ಲಿ ರೈತರಿಗೆ 24 ಗಂಟೆ ವಿದ್ಯುತ್, ಸ್ವಸಹಾಯ ಗುಂಪುಗಳ ಸಾಲ ಮನ್ನಾ, ಮಾಸಾಶನ ಹೆಚ್ಚಳ, ಸಾಗುವಳಿಗಾಗಿ ರೈತರಿಗೆ ಎಕರೆಗೆ 10 ಸಾವಿರ ಸಹಾಯಧನ ಸೇರಿ ಅನೇಕ ಭರವಸೆಗಳನ್ನು ಕೊಟ್ಟಿದ್ದೇವೆ. ಬೀದರ್‍ನಿಂದ ಚಾಮರಾಜನಗರ ವರೆಗೆ ಜೆಡಿಎಸ್ ಪರ ಒಲವು ಇದೆ ಎಂದು ತಿಳಿಸಿದರು.
ಖೂಬಾಗೆ ಟಿಕೆಟ್: ವರಿಷ್ಠರಿಗೆ ಬಿಟ್ಟ ವಿಚಾರ
ಬೀದರ್: ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರಿಗೆ ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಈಗಾಗಲೇ ಘೋಷಿಸಲಾಗಿದೆ. ಮಲ್ಲಿಕಾರ್ಜುನ ಖೂಬಾ ನಮ್ಮ ಪಕ್ಷದವರು. ಮೊದಲಿನಿಂದಲೂ ನಮ್ಮ ಜತೆಗೆ ಇದ್ದರು. ಈಗ ಮರಳಿ ಬಂದಿದ್ದಾರೆ. ಅವರು ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.