ಬೀದರ್: ‘ರಾಜ್ಯದಲ್ಲಿ ಹೊಸ ಗೋ ಶಾಲೆಗಳನ್ನು ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿಯವರು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದ್ದಾರೆ.
‘ಪ್ರಸಕ್ತ ಸಾಲಿನಲ್ಲಿ ಗೋಶಾಲೆಗಳ ನಿರ್ವಹಣೆಗೆ ₹120 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಯಾವುದೇ ಹೊಸ ಗೋ ಶಾಲೆಗಳನ್ನು ತೆಗೆಯುತ್ತಿಲ್ಲ. ಪುಣ್ಯ ಕೋಟಿ ದತ್ತು ಯೋಜನೆಯಡಿ ರಾಜ್ಯದಲ್ಲಿ 227 ನೋಂದಣಿಯಾದ ಗೋಶಾಲೆಗಳಿವೆ. ಗೋಶಾಲೆಗಳಲ್ಲಿ 33,787 ಜಾನುವಾರುಗಳಿವೆ. ಮಾರ್ಚ್‌ನಲ್ಲಿ ಜಾನುವಾರುಗಳ ನಿರ್ವಹಣೆಗೆ ₹27.35 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಜಾನುವಾರು ಹತ್ಯೆ ಮತ್ತು ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದ ನಂತರ ವಧೆಯಾಗದೆ ಕಸಾಯಿಖಾನೆಗೆ ಹೋಗದೆ ಇರುವ ಜಾನುವಾರುಗಳ ನಿಖರವಾದ ಮಾಹಿತಿ ಇಲಾಖೆಯಲ್ಲಿ ಲಭ್ಯವಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಂಬಾರಿ ಎ.ಸಿ. ಸ್ಲೀಪರ್ ಬಸ್ ಲಭ್ಯವಿಲ್ಲದ ಕಾರಣ ಬೀದರ್–ಬೆಂಗಳೂರು ಮಾರ್ಗದಲ್ಲಿ ಹೊಸ ಬಸ್ ಬಿಡುವ ಯೋಜನೆ ಸದ್ಯಕ್ಕಿಲ್ಲ ಎಂದು ಅರಳಿಯವರ ಇನ್ನೊಂದು ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬೀದರ್ ಘಟಕದಿಂದ ನಾನ್ ಎ.ಸಿ. ಸ್ಲೀಪರ್ ರಾಜಹಂಸ ತಲಾ ಒಂದು ಬಸ್ ಹಾಗೂ ಭಾಲ್ಕಿ ಘಟಕದಿಂದ ಎರಡು ನಾನ್ ಎ.ಸಿ. ಸ್ಲೀಪರ್ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತಿವೆ. ಪ್ರಯಾಣಿಕರ ಕೊರತೆಯಿಂದ ಐರಾವತ್ ಕ್ಲಬ್ ಕ್ಲಾಸ್ ಸಾರಿಗೆಯಿಂದ ಇಲಾಖೆಗೆ ನಷ್ಟವಾಗುತ್ತಿದೆ. ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಮಾತ್ರ ಐರಾವತ್ ಸೇವೆ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.