ADVERTISEMENT

ಪ್ರತಿ ಕ್ಷೇತ್ರದಿಂದ ಮೂವರ ಹೆಸರು: ಸೋಮನಾಥ ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 4:37 IST
Last Updated 3 ಮಾರ್ಚ್ 2024, 4:37 IST
ಸೋಮನಾಥ ಪಾಟೀಲ 
ಸೋಮನಾಥ ಪಾಟೀಲ    

ಬೀದರ್‌: ‘ಮುಂಬರುವ ಲೋಕಸಭೆ ಚುನಾವಣೆಗೆ ಅಭಿಪ್ರಾಯ ಸಂಗ್ರಹಿಸಲು ವೀಕ್ಷಕರು ಜಿಲ್ಲೆಗೆ ಬಂದಿದ್ದಾರೆ. ಪಕ್ಷದ ಪದಾಧಿಕಾರಿಗಳಿಂದ ಅವರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದರ ಜೊತೆಗೆ ಜಿಲ್ಲಾ ಘಟಕದಿಂದ ಮೂವರ ಹೆಸರನ್ನು ಕಡ್ಡಾಯವಾಗಿ ಕಳಿಸಿಕೊಡಬೇಕೆಂದು ಪಕ್ಷದ ಹೈಕಮಾಂಡ್‌ ತಿಳಿಸಿದೆ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.

ಶಾಸಕ ಅಭಯ ಪಾಟೀಲ ಹಾಗೂ ರಾಜೂಗೌಡ ಅವರು ಪಕ್ಷದ ವೀಕ್ಷಕರಾಗಿ ಶನಿವಾರ ನಗರಕ್ಕೆ ಬಂದು, ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ಪದಾಧಿಕಾರಿಗಳಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಒಬ್ಬರೇ ಅಭ್ಯರ್ಥಿಯಾಗಿದ್ದರೂ ಸಹ ಮೂವರ ಹೆಸರು ಕಳಿಸುವುದು ಕಡ್ಡಾಯ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಿದ್ದರೂ ಅಲ್ಲಿಂದಲೂ ಮೂವರ ಹೆಸರು ಕಳಿಸಿಕೊಡಲಾಗುತ್ತಿದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕರು ಇಚ್ಛೆ ಹೊಂದಿದ್ದಾರೆ. ಅನೇಕರು ಅರ್ಜಿ ಕೂಡ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಎಷ್ಟು ಜನರಿದ್ದಾರೆ ಎಂಬ ಪಟ್ಟಿ ಸಿದ್ಧಪಡಿಸಲು ಆಗಿಲ್ಲ. ಯಾರಿಗೆ ಪಕ್ಷ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ಆದರೆ, ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಹಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಆ ಪಕ್ಷದ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ ಎಂದರು.

ADVERTISEMENT

ಬೆಂಗಳೂರಿನ ರಾಮೇಶ್ವರಂನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಈ ಹಿಂದೆ ಡಿಜೆ ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಕೃತ್ಯ ಎಸಗಿದವರ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಶಾಮಿಲಾಗಿದ್ದ ಒಬ್ಬ ವ್ಯಕ್ತಿಯನ್ನು ನಿಗಮ, ಮಂಡಳಿಗೆ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಆಳಂದ, ಅಫಜಲಪುರದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ ಮಾತನಾಡಿ, ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿ ಬಿಕ್ಕಟ್ಟು ಇದೆ. ಬಿಜೆಪಿಯಲ್ಲಿ ಒಗ್ಗಟ್ಟಿದೆ. ‘ಇಂಡಿಯಾ’ ಮೈತ್ರಿಕೂಟ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಕಾಂಗ್ರೆಸ್‌ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಮೈತ್ರಿಕೂಟದಲ್ಲಿ ಯಾರಾದರೂ ಸೇರಿದರೆ ಸಾಕು ಎಂಬಂತಾಗಿದೆ. ಯುದ್ಧಕ್ಕೆ ಮೊದಲೇ ಕಾಂಗ್ರೆಸ್‌ ಶಸ್ತ್ರತ್ಯಾಗ ಮಾಡಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನವರು ರಾಜ್ಯದ ಒಂಬತ್ತು ಸಚಿವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲು ಯೋಜಿಸಿದ್ದಾರೆ. ಆದರೆ, ಒಬ್ಬ ಸಚಿವ ಕೂಡ ಮನಸ್ಸಿನಿಂದ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳುತ್ತಿಲ್ಲ. ನಾನು ಬೇಡ ನನ್ನ ಮಗ, ಮಗಳು, ಹೆಂಡತಿ, ಸಹೋದರನಿಗೆ ಕೊಡಿ ಎನ್ನುತ್ತಿದ್ದಾರೆ. ಈ ಸಲದ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ, 3ರಲ್ಲಿ ಜೆಡಿಎಸ್‌ ಗೆಲ್ಲಲ್ಲಿದೆ ಎಂದರು.

ಶಾಸಕರಾದ ಪ್ರಭು ಚವಾಣ್‌, ಡಾ.ಅವಿನಾಶ ಜಾಧವ, ಡಾ. ಸಿದ್ದಲಿಂಗಪ್ಪ ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ್‌, ಪಕ್ಷದ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್‌ ಠಾಕೂರ, ಜಿಲ್ಲಾ ವಕ್ತಾರ ಸದಾನಂದ ಜೋಶಿ, ಸಹ ವಕ್ತಾರ ಬಸವರಾಜ ಪವಾರ, ಮಾಧ್ಯಮ ಪ್ರಮುಖ ಶ್ರೀನಿವಾಸ ಚೌಧರಿ ಹಾಜರಿದ್ದರು.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವೀಕ್ಷಕರು ಜಿಲ್ಲೆಗೆ ಬಂದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಾನೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ.
ರಘುನಾಥರಾವ್‌ ಮಲ್ಕಾಪೂರೆ, ವಿಧಾನ ಪರಿಷತ್‌ ಸದಸ್ಯ
ಬಸವಕಲ್ಯಾಣದ ಅನುಭವ ಮಂಟಪ ಕಾಮಗಾರಿಗೆ ಇದುವರೆಗೆ ಹಣ ಬಿಡುಗಡೆಗೊಳಿಸಿಲ್ಲ. ಉಸ್ತುವಾರಿ ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ.
ಶರಣು ಸಲಗರ, ಬಸವಕಲ್ಯಾಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.