ಭಾಲ್ಕಿ: ‘ಪ್ರತಿ ಜಾನುವಾರಿನ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ರೈತರಿಗೆ ಕಾಲ-ಕಾಲಕ್ಕೆ ಸೂಕ್ತ ಮಾರ್ಗದರ್ಶನ, ಸಲಹೆ ನೀಡಬೇಕಾಗಿರುವುದು ಎಲ್ಲ ಪಶು ವೈದ್ಯಾಧಿಕಾರಿಗಳ ಕರ್ತವ್ಯ’ ಎಂದು ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಪ್ರಕಾಶಕುಮಾರ ರಾಠೋಡ ಹೇಳಿದರು.
ತಾಲ್ಲೂಕಿನ ಕಟ್ಟಿ ತುಗಾಂವ ಗ್ರಾಮದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದಲ್ಲಿ (ದೇವಣಿ) ಪಶುವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ, ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿನ ಚಟುವಟಿಕೆಗಳಾದ ಬಂಧನ ಮುಕ್ತ ಪದ್ಧತಿ, ಕಡಿಮೆ ಖರ್ಚಿನಲ್ಲಿ ಹಸಿ ಮೇವು ಹಾಗೂ ಪಶು ಆಹಾರ ತಯಾರಿಸುವುದು, ಜಾನುವಾರುಗಳ ಆರೋಗ್ಯ ರಕ್ಷಣೆ, ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರುಕಟ್ಟೆ ಸೇರಿ ವಿವಿಧ ವಿಷಯಗಳ ಕುರಿತು ವಿವರಿಸಿದರು.
ಪಶುಸಂಗೋಪನಾ, ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರವೀಂದ್ರ ಭೂರೆ ಮಾತನಾಡಿ,‘ಅನ್ನದಾತರಿಗೆ ಹಾಲಿನ ಉತ್ಪನ್ನಗಳ ತಯಾರಿಕೆ, ಮೇವಿನ ಸದ್ಬಳಕೆ, ಆರೋಗ್ಯ ರಕ್ಷಣೆ ಹಾಗೂ ಶುದ್ಧ ಹಾಲು ಉತ್ಪಾದನೆಯಂಥ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು’ ಎಂದು ತಿಳಿಸಿದರು. ವಿಜಯಕುಮಾರ, ವಿಕ್ರಮ ಚಾಕೋತೆ ಹಾಗೂ ಶಿವಶರಣಪ್ಪ ಯಲಗೋಡ ಮಾತನಾಡಿದರು. 40 ಪಶುವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.