ADVERTISEMENT

ಬೀದರ್‌ | ಅರಣ್ಯ ಜಾಗ ಒತ್ತುವರಿದಾರರಿಗೆ ಸಂಕಷ್ಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಡಿಸೆಂಬರ್ 2023, 4:52 IST
Last Updated 19 ಡಿಸೆಂಬರ್ 2023, 4:52 IST
ಬೀದರ್‌ನ ಶಹಾಪುರ ಗೇಟ್‌ ಪ್ರದೇಶದಲ್ಲಿ ಅರಣ್ಯ ಜಮೀನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಾಂಪೌಂಡ್‌ಗಳನ್ನು ಅರಣ್ಯ ಇಲಾಖೆ ಜೆಸಿಬ ಮೂಲಕ ತೆರವುಗೊಳಿಸಿತು
ಬೀದರ್‌ನ ಶಹಾಪುರ ಗೇಟ್‌ ಪ್ರದೇಶದಲ್ಲಿ ಅರಣ್ಯ ಜಮೀನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಾಂಪೌಂಡ್‌ಗಳನ್ನು ಅರಣ್ಯ ಇಲಾಖೆ ಜೆಸಿಬ ಮೂಲಕ ತೆರವುಗೊಳಿಸಿತು   

ಬೀದರ್‌: ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲು ಜಿಲ್ಲಾ ಅರಣ್ಯ ಇಲಾಖೆ ಮುಂದಾಗಿದೆ.

ಅರಣ್ಯ ಜಮೀನನ್ನು ಒತ್ತುವರಿ ಮಾಡಿ ಕೃಷಿ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದವರ ವಿರುದ್ಧ ಈಗಾಗಲೇ ಜಿಲ್ಲೆಯಾದ್ಯಂತ ಕ್ರಮ ಜರುಗಿಸಲಾಗಿದೆ. ಅದರ ಭಾಗವಾಗಿಯೇ ಜಿಲ್ಲೆಯಾದ್ಯಂತ 364 ಎಕರೆ ಪ್ರದೇಶವನ್ನು ಒತ್ತುವರಿದಾರರಿಂದ ಅರಣ್ಯ ಇಲಾಖೆಯು ಮರು ವಶಕ್ಕೆ ಪಡೆದಿದೆ. ಇದರಲ್ಲಿ ಬೀದರ್‌ನ ಶಹಾಪುರ ಗೇಟ್‌ ಸಮೀಪವೊಂದರಲ್ಲೇ 104 ಎಕರೆ ಅರಣ್ಯ ಜಮೀನಿನ ಅತಿಕ್ರಮಣ ತೆರವುಗೊಳಿಸಿ ತನ್ನ ಸುಪರ್ದಿಗೆ ಪಡೆದಿದೆ.

ಶಹಾಪುರ ಗೇಟ್‌ ಸಮೀಪ ಅನಧಿಕೃತವಾಗಿ ಅರಣ್ಯ ಜಮೀನಿನಲ್ಲಿ ಲೇಔಟ್‌ ನಿರ್ಮಿಸಲಾಗಿತ್ತು. ಕೆಲವರು ನಿವೇಶನ ಖರೀದಿಸಿ, ಬೇಸ್‌ಮೆಂಟ್‌ ಕೂಡ ನಿರ್ಮಿಸಿದ್ದರು. ಈಗ ಅದನ್ನೆಲ್ಲ ಜೆಸಿಬಿಯಿಂದ ತೆರವುಗೊಳಿಸಲಾಗಿದೆ. ಸತತ ಎರಡು ದಿನಗಳ ವರೆಗೆ ಕಾರ್ಯಾಚರಣೆ ನಡೆಸಿ, ಸರ್ಕಾರಿ ಜಾಗವನ್ನು ಮರು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆದಿದ್ದು ಇದೇ ಮೊದಲು ಎನ್ನಲಾಗುತ್ತಿದೆ.

ADVERTISEMENT

ನೋಟಿಸ್‌ಗೆ ಸಿದ್ಧತೆ

ಅರಣ್ಯ ಜಮೀನನ್ನು ಮರು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಚುರುಕಿನಿಂದ ಕೆಲಸ ಮಾಡುತ್ತಿದೆ. ಕಂದಾಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯ, ಡೀಮ್ಡ್‌ ಫಾರೆಸ್ಟ್‌ ಸೇರಿದಂತೆ ಎಲ್ಲದರ ಬಗ್ಗೆ ಜಂಟಿ ಸರ್ವೇ ನಡೆಸಲಾಗುತ್ತಿದೆ. ಸರ್ವೇ ಮುಗಿದ ನಂತರ ಒತ್ತುವರಿದಾರರಿಗೆ ನೋಟಿಸ್‌ ಕೊಟ್ಟು ಜಮೀನು ಮರು ಸ್ವಾಧೀನಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ಕೈಗೊಳ್ಳಲಾಗಿದ್ದು ಯಾರೇ ಅರಣ್ಯ ಜಾಗ ಒತ್ತುವರಿ ಮಾಡಿದರೆ ಕ್ರಮ ಜರುಗಿಸಲಾಗುವುದು.
ಎಂ.ಎಂ. ವಾನತಿ, ಡಿಸಿಎಫ್‌

‘ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್‌ ಹಾಗೂ ಬೀದರ್‌ ತಾಲ್ಲೂಕಿನಲ್ಲಿ ಒಟ್ಟು 364 ಎಕರೆ ಅರಣ್ಯ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ. ಅಧಿಕೃತವಾಗಿ ದೂರು ದಾಖಲಿಸಿದ ಒಂದು ಸಾವಿರ ಎಕರೆ ಒತ್ತುವರಿ ತೆರವುಗೊಳಿಸಬೇಕಿದೆ. ಇನ್ನು, ಪ್ರಕರಣ ದಾಖಲಾಗದ 2,500 ಜಮೀನು ಬೇರೆ ಇದೆ. ಹೀಗಾಗಿಯೇ ಜಂಟಿ ಸರ್ವೇ ಕೈಗೊಳ್ಳಲಾಗಿದೆ. ಸರ್ವೇ ಮುಗಿದ ನಂತರ ಸಂಬಂಧಿಸಿದವರಿಗೆ ನೋಟಿಸ್‌ ಕೊಟ್ಟು ಕ್ರಮ ಜರುಗಿಸಲಾಗುವುದು. ನಮ್ಮ ಕೆಲಸದ ಮೇಲೆ ಯಾರು ಕೂಡ ಪ್ರಭಾವ ಬೀರುತ್ತಿಲ್ಲ’ ಎಂದು ಡಿಸಿಎಫ್‌ ಎಂ.ಎಂ. ವಾನತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಚಿರತೆಗೆ ಭಯ ಪಡಬೇಕಿಲ್ಲ’

‘ಬೀದರ್‌ ತಾಲ್ಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದರ ಚಲನವಲನ ಅರಣ್ಯ ಇಲಾಖೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನವಸತಿ ಪ್ರದೇಶದಲ್ಲಿ ಓಡಾಡಿರುವ ಬಗ್ಗೆ ಸುತ್ತಮುತ್ತಲ ಗ್ರಾಮಗಳ ಜನರಿಂದ ಯಾವುದೇ ದೂರು ಬಂದಿಲ್ಲ. ಅರಣ್ಯದಲ್ಲಿ ಅದಕ್ಕೆ ಎಲ್ಲ ರೀತಿಯ ಆಹಾರ ಸಿಗುತ್ತಿದೆ. ಅದು ಹೊರಗೆ ಬರುತ್ತಿಲ್ಲ. ಯಾರು ಭಯಪಡುವ ಅಗತ್ಯವಿಲ್ಲ. ಆದರೆ ಸುತ್ತಮುತ್ತಲಿನ ಜನ ಎಚ್ಚರ ವಹಿಸಬೇಕು. ಈ ಬಗ್ಗೆ ಅರಣ್ಯ ಇಲಾಖೆಯಿಂದಲೂ ಜಾಗೃತಿ ಮೂಡಿಸಲಾಗುವುದು’ ಎಂದು ಡಿಸಿಎಫ್‌ ಎಂ.ಎಂ. ವಾನತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಹೊನ್ನಿಕೇರಿಯಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆಯೇ ಬೇರೆ ಇದೇ ಬೇರೆ. ಇತ್ತೀಚೆಗೆ ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಮೃತ ಚಿರತೆಯ ಕೊಳೆತ ಕಳೇಬರ ಪತ್ತೆಯಾಗಿತ್ತು. ಹೊನ್ನಿಕೇರಿಯಲ್ಲಿ ಹಿಂದೆ ಪತ್ತೆಯಾಗಿದ್ದ ಚಿರತೆ ಸತ್ತಿದೆಯೋ ಅಥವಾ ಜೀವಂತವಾಗಿದೆಯೋ ಗೊತ್ತಿಲ್ಲ. ಈಗ ಅದೇ ಭಾಗದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಎಷ್ಟಿದೆ ಎನ್ನುವ ನಿಖರ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.

ಹೊನ್ನಿಕೇರಿ ಅರಣ್ಯ ಪ್ರದೇಶದೊಳಗೆ ಅರಣ್ಯ ಇಲಾಖೆ ಇರಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.