ADVERTISEMENT

ಒಳಮೀಸಲಾತಿ ಜಾರಿಗೆ ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಸೂರ್ಯಕಾಂತ ಕಮಠಾಣ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:24 IST
Last Updated 23 ಅಕ್ಟೋಬರ್ 2024, 16:24 IST
ಸೂರ್ಯಕಾಂತ
ಸೂರ್ಯಕಾಂತ   

ಬೀದರ್‌: ‘ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಕಮಠಾಣ ತಿಳಿಸಿದರು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶಗಳನ್ನು ಆಧರಿಸಿ ಮುನ್ನಡೆಯುತ್ತಿರುವುದು ಸರಿಯಲ್ಲ. ಇದು ಸಾಮಾಜಿಕ ನ್ಯಾಯದ ಕಗ್ಗೊಲೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯದ ಕುರಿತು ಸಮಗ್ರ ಹಾಗೂ ವಸ್ತುನಿಷ್ಠ ಅಂಕಿ-ಅಂಶಗಳ ಕೊರತೆ ಇದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಒಳಮೀಸಲಾತಿ ವರ್ಗೀಕರಣದ ನಿರ್ಧಾರ ಕೈಗೊಳ್ಳಲು ಹೊರಟಿರುವುದು ಸರಿಯಾದ ನಡೆಯಲ್ಲ ಎಂದರು.

ADVERTISEMENT

ಮೀಸಲಾತಿ ಹಂಚಿಕೆಯ ಕುರಿತು ಸಮಗ್ರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವನ್ನು ಖಾತ್ರಿ ಪಡಿಸಲು ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಢೀಕರಿಸಬೇಕು. ಅದನ್ನು ವಿಶ್ಲೇಷಿಸಿ ತಜ್ಞರಿಂದ ವರದಿ ಪಡೆದು ಮುಂದುವರೆಯುವುದು ಸೂಕ್ತ ಎಂದು ಹೇಳಿದರು.

101 ಜಾತಿಗಳ ಅಹವಾಲುಗಳನ್ನು ಮುಕ್ತವಾಗಿ ಆಲಿಸಿ, ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚಿಸಿ, ಒಳಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕುಳುವ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿಂದ್ರ ಭಂಗೆ, ಜಿಲ್ಲಾ ಗೌರವಾಧ್ಯಕ್ಷ ಬಾಳಪ್ಪ ಸಿಂದನಕೇರಾ, ಬಾಬು ಕೋರವ, ರಘುನಾಥ ಕೋರವ, ರಾಮು ನೌಬಾದ್, ರವಿಕುಮಾರ ಕುಣಸಾರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.