ಪ್ರಜಾವಾಣಿ ವಾರ್ತೆ
ಬೀದರ್: ‘ವಿವಿಧ ನಿಗಮ–ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ನವೆಂಬರ್ 19ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಇಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕರ್ನಾಟಕ ಕಟ್ಟಡ ಮತ್ತ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿವೆ. ಬೀದರ್ ನಗರದ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ 5,388 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು’ ಎಂದು ತಿಳಿಸಿದರು.
‘ಹಿಂದೆ ಕೆಇಎಯಿಂದ ನಡೆಸಿದ ಪರೀಕ್ಷೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಅವುಗಳನ್ನು ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಪರೀಕ್ಷೆ ದಿನದಂದು ಯಾವುದೇ ಲೋಪವಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಪೊಲೀಸ್ ಇಲಾಖೆ ಹಾಗೂ ಪರೀಕ್ಷೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಪರೀಕ್ಷೆಯನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಾಧ್ಯ’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಡಿವೈಎಸ್ಪಿ ಶಿವನಗೌಡ ಪಾಟೀಲ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಪ್ರಾಂಶುಪಾಲರು, ಕಸ್ಟೋಡಿಯನ್‌ಗಳು, ಮಾರ್ಗ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ವೀಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
Cut-off box - ಪರೀಕ್ಷೆಗೆ ಡ್ರೆಸ್ ಕೋಡ್ ಪರೀಕ್ಷೆ ಬರೆಯಲಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ನಿಗದಿಪಡಿಸಲಾಗಿದೆ. ನಿರ್ದಿಷ್ಟವಾಗಿ ಸೂಚಿಸಿದ ರೀತಿಯಲ್ಲಿಯೇ ಅವರು ಬಟ್ಟೆಗಳನ್ನು ಧರಿಸಿಕೊಂಡ ಪರೀಕ್ಷೆಗೆ ಹಾಜರಾಗತಕ್ಕದು. ಪುರುಷ ಅಭ್ಯರ್ಥಿಗಳು ಪರೀಕ್ಷೆಯ ದಿನ ಪೂರ್ಣ ತೋಳಿನ ಶರ್ಟ್‌ಗಳನ್ನು ಧರಿಸುವಂತಿಲ್ಲ. ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸಬೇಕು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ ಧರಿಸಬಹುದು (ಜೇಬುಗಳು ಇಲ್ಲದಿರುವ ಕಮ್ಮಿ ಜೇಬುಗಳಿರುವ). ಕುರ್ತಾ ಪೈಜಾಮ ಜೀನ್ಸ್ ಪ್ಯಾಂಟ್ ಧರಿಸಿ ಬಂದವರಿಗೆ ಪರೀಕ್ಷೆ ಹಾಜರಾಗಲು ಅನುಮತಿ ಕಲ್ಪಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು. ಹಗುರವಾದ ಬಟ್ಟೆಗಳನ್ನು ಧರಿಸಬೇಕು. ಜಿಪ್ ಪಾಕೆಟ್ ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಧರಿಸಿಕೊಂಡು ಹೋಗುವಂತಿಲ್ಲ. ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸಬೇಕು. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳನ್ನು ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ ಹೂಗಳು ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆ ಜೀನ್ಸ್ ಪ್ಯಾಂಟ್ ಧರಿಸಬಾರದು. ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮದಂತೆ ಧರಿಸಬೇಕು. ಎತ್ತರವಾದ ಹಿಮ್ಮಡಿಯ ಶೂಗಳನ್ನು ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯ. ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ (ಮಂಗಳಸೂತ್ರ ಮತ್ತು ಕಾಲುಂಗರ ಹೊರತುಡಿಸಿ) ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.