ಭಾಲ್ಕಿ: ಪಟ್ಟಣವೂ ವಚನ ಜಾತ್ರೆ-2022 ಮತ್ತು ಡಾ.ಚನ್ನಬಸವ ಪಟ್ಟದ್ದೇವರ 23ನೇಯ ಸ್ಮರಣೋತ್ಸವ ಆಚರಣೆಗೆ ಸಜ್ಜುಗೊಂಡಿದೆ.
ಗುರುವಾರ ಹಾಗೂ ಶುಕ್ರವಾರ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.
ವೇದಿಕೆ ಬಲ ಭಾಗದಲ್ಲಿ ಪೆಂಡಾಲ್ ಹಾಕಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಪಟ್ಟದ್ದೇವರ ಧ್ಯಾನ ಮಂದಿರ ವಿದ್ಯುತ್ ದೀಪಲಂಕಾರ ಮತ್ತು ಹೂವುಗಳಿಂದ ಕಂಗೊಳಿಸುತ್ತಿದೆ. ಚನ್ನಬಸವಾಶ್ರಮ ಎದುರಿನ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ, ಬೊಮಗೊಂಡೇಶ್ವರ ವೃತ್ತ ಸೇರಿ ಮುಂತಾದ ಪ್ರಮುಖ ರಸ್ತೆಗಳಲ್ಲಿ ಕಾವಿ ಬಣ್ಣದ ಕಮಾನಗಳು ಭಕ್ತರನ್ನು ಸ್ವಾಗತಿಸುತ್ತಿವೆ.
ಎಲ್ಲೆಡೆ ಭಕ್ತರನ್ನು ಸ್ವಾಗತಿಸುವ ಬ್ಯಾನರ್‌ಗಳು ರಾರಾಜಿಸುತ್ತಿವೆ. ಸಮಾರಂಭದಲ್ಲಿ ಭಾಗವಹಿಸುವ ಮಠಾಧೀಶರು, ಅತಿಥಿ, ಗಣ್ಯರು, ಸಾಹಿತಿಗಳ ವಸತಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ವಾಹನ ನಿಲುಗಡೆಗಾಗಿ ಪುರಭವನ ಆವರಣ, ಲೋಕೋಪಯೋಗಿ ಇಲಾಖೆ, ತಹಶೀಲ್ ಕಚೇರಿ ಆವರಣ ಸೇರಿ ಮುಂತಾದ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಾಡಿನ ಹೆಸರಾಂತ ಮಠಾಧೀಶರು, ರಾಜಕೀಯ ಗಣ್ಯರು, ಹಿರಿಯ ಸಾಹಿತಿಗಳು, ಕಲಾವಿದರು ಎರಡು ದಿನ ನಡೆಯುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
21 ರಂದು ಬೆಳಿಗ್ಗೆ 6ಕ್ಕೆ ಪ್ರಭಾತ ಪಥ ಸಂಚಲನ, 7ಕ್ಕೆ ಘಟ್‍ಸ್ಥಲ ಧ್ವಜರೋಹಣ, ಸಂಜೆ 4ಕ್ಕೆ ಉದ್ಘಾಟನಾ ಸಮಾರಂಭ, ಜರುಗಲಿದೆ. 22 ರಂದು ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, 10ಕ್ಕೆ ಅನುಭಾವ ಗೋಷ್ಠಿ, ಗ್ರಂಥ ಲೋಕಾರ್ಪಣೆ, ಸಂಜೆ 4ಕ್ಕೆ ಸಮಾರೋಪ ಸಮಾರಂಭ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಸೇರಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಲಿವೆ.
ಸಮಾರಂಭದ ಅಂತಿಮ ಹಂತದ ಸಿದ್ಧತೆಯನ್ನು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಎಸ್ಪಿ ಡಿ.ಕಿಶೋರ ಬಾಬು ಸೇರಿ ಪ್ರಮುಖರು ವೀಕ್ಷಿಸಿದರು. ಬುಧವಾರ ಚನ್ನಬಸವಾಶ್ರಮ ಪರಿಸರದಲ್ಲಿ ಸಿದ್ಧವಾಗುತ್ತಿರುವ ಸಮಾರಂಭದ ವೇದಿಕೆಯನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ನಗರ ಪೊಲೀಸ್ ಠಾಣೆಯ ಸಿಪಿಐ ಸುಶೀಲಕುಮಾರ ಬಿ, ಪ್ರಮುಖರಾದ ವಿಶ್ವನಾಥಪ್ಪ ಬಿರಾದಾರ, ಶಶಿಧರ ಕೋಸಂಬೆ, ಸಂಗಮೇಶ ಹುಣಜೆ ಮದಕಟ್ಟಿ, ರವೀಂದ್ರ ಚಿಡಗುಪ್ಪೆ ಧನರಾಜ ಬಂಬುಳಗೆ ಹಲವರು ಇದ್ದರು. ಗದ್ದುಗೆ ದರ್ಶನ ಪಡೆದ ಎಸ್ಪಿ ಇದೇ ಮೊದಲ ಬಾರಿಗೆ ಚನ್ನಬಸವಾಶ್ರಮ ಧ್ಯಾನ ಮಂದಿರಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ಅವರು ಪಟ್ಟದ್ದೇವರ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆದರು.
ಬಳಿಕ ಅವರನ್ನು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸನ್ಮಾನಿಸಿ, ಗೌರವಿಸಿದರು.
ಬೊಂದಿ, ಹುಗ್ಗಿ ಸವಿಯುವ ಭಾಗ್ಯ: ಸಮಾರಂಭದಲ್ಲಿ ಕರ್ನಾಟಕ ಸೇರಿ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯದಿಂದ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ಭಾಗಿಯಾಗುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಬರುವ ಭಕ್ತರಿಗೆ ಕುಟ್ಟಿದ ಹುಗ್ಗಿ, ಅನ್ನ, ಸಾರು ಜತೆಗೆ ಬೊಂದಿ, ಜೋಳದ ರೊಟ್ಟಿ, ಚಟ್ನಿ, ಮೋಸರು ಬಡಿಸಲು ಸಿದ್ಧತೆ ನಡೆದಿವೆ.
ಯುವಕರಿಂದ ಬೈಕ್ ರ‍್ಯಾಲಿ: ಮಜ್ಜಿಗೆ ವ್ಯವಸ್ಥೆ
ಡಾ.ಚನ್ನಬಸವ ಪಟ್ಟದ್ದೇವರ 23ನೇಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2022ರ ಪ್ರಚಾರರ್ಥವಾಗಿ ಪಟ್ಟಣದಲ್ಲಿ ನೂರಾರು ಯುವಕರು ಬೈಕ್ ರ‍್ಯಾಲಿ ನಡೆಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಬುಧವಾರ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆದ ಯುವಕರ ಬೈಕ್ ರ‍್ಯಾಲಿಗೆ ಹುಮನಾಬಾದ್-ಬಸವಕಲ್ಯಾಣ ಡಿವೈಎಸ್ಪಿ ಸೋಮಲಿಂಗ ಕುಂಬಾರ ಅವರು ಕಾವಿ ಬಣ್ಣದ ಧ್ವಜ ತೋರಿಸಿ ಚಾಲನೆ ನೀಡಿದರು.
ನೂರಾರು ಯುವಕರು ತಮ್ಮ ಬೈಕ್‍ಗಳಿಗೆ ಕಾವಿ ಬಣ್ಣದ ಧ್ವಜ ಕಟ್ಟಿಕೊಂಡು ಶಿಸ್ತಿನಿಂದ ಹೊರಟು ಹಳೇ ಪಟ್ಟಣದ ಚವಡಿ ಏರಿಯಾ, ತೀನ್‍ದುಕಾನ್, ಗಡಿ ಏರಿಯಾ, ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಚನ್ನಬಸವಾಶ್ರಮ ಪರಿಸರದಲ್ಲಿ ಬೈಕ್ ರ‍್ಯಾಲಿ ಸಮಾವೇಶಗೊಂಡಿತು.
ಬೈಕ್ ರ‍್ಯಾಲಿಯುದ್ದಕ್ಕೂ ನೂರಾರು ಯುವಕರು ವಿಶ್ವ ಗುರುಬಸವಣ್ಣನವರ ಮತ್ತು ಪಟ್ಟದ್ದೇವರ ಜಯಘೋಷ ಕೂಗಿ ಭಕ್ತಿ ಭಾವ ಮೆರೆದದರು. ಬೈಕ್ ರ‍್ಯಾಲಿಗೂ ಮುನ್ನ ಯುವ ಮುಖಂಡ ಸಾಗರ ಖಂಡ್ರೆ ಅವರು ಬಸವ ಗುರುವಿನ ಪೂಜೆ ನೆರವೇರಿಸಿದರು.
ಯುವ ಮುಖಂಡರಾದ ಟಿಂಕು ರಾಜಭವನ, ಆಕಾಶ ರಿಕ್ಕೆ, ಕಾಶಿನಾಥ ಕೊಡುಗೆ, ದೀಪಕ ಕಲ್ಯಾಣೆ, ಸಂಗಮೇಶ ವಾಲೆ, ಕಪಿಲ್ ಕಲ್ಯಾಣೆ, ಚನ್ನು ಮೀನಕರೆ, ಸತೀಶ ಅಡರಂಗೆ, ಶ್ರೀನಿವಾಸ ಮೇತ್ರೆ, ಆನಂದ ಬಿರಾದಾರ, ಡಿಬಾಸ್ ಇದ್ದರು.
ಬಸವೇಶ್ವರ ಸಂಘದಿಂದ ಮಜ್ಜಿಗೆ ವಿತರಣೆ
ಬೈಕ್ ರ‍್ಯಾಲಿ ಹಮ್ಮಿಕೊಂಡ ಯುವಕರಿಗೆ ಪಟ್ಟಣದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಮಜ್ಜಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಬುಧವಾರ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಯುವ ಮುಖಂಡ ಸಾಗರ ಖಂಡ್ರೆ ಅವರು ಮಜ್ಜಿಗೆ ವಿತರಣೆಗೆ ಚಾಲನೆ ನೀಡಿದರು.
ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ, ಉಪಾಧ್ಯಕ್ಷ ಸಂಗಮೇಶ ಹುಣಜೆ ಮದಕಟ್ಟಿ, ನಿರ್ದೇಶಕರಾದ ಪ್ರಭು ಡಿಗ್ಗೆ, ರವೀಂದ್ರ ಚಿಡಗುಪ್ಪೆ, ಸಂಗಮೇಶ ಗುಮ್ಮೆ, ಶೈಲೇಶ ಚಳಕಾಪೂರೆ, ಪ್ರಮುಖರಾದ ಟಿಂಕು ರಾಜಭವನ, ಆಕಾಶ ರಿಕ್ಕೆ ಹಾಗೂ ಅಜಿತ್ ಚವ್ಹಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.