ADVERTISEMENT

ಚಿಟಗುಪ್ಪ: ವೀರಭದ್ರೇಶ್ವರ ದೇವರ ವಿಶಿಷ್ಟ ಅಗ್ನಿಕುಂಡ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:50 IST
Last Updated 26 ಜನವರಿ 2023, 4:50 IST
ಹುಮನಾಬಾದ್‌ನ ರಥ ಮೈದಾನದಲ್ಲಿರುವ ವಿಶಿಷ್ಟ ಅಗ್ನಿಕುಂಡ
ಹುಮನಾಬಾದ್‌ನ ರಥ ಮೈದಾನದಲ್ಲಿರುವ ವಿಶಿಷ್ಟ ಅಗ್ನಿಕುಂಡ   

ಚಿಟಗುಪ್ಪ: ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇಗುಲದ ಅಗ್ನಿಕುಂಡವನ್ನು ಕಳೆದ ಮೂರು ವರ್ಷಗಳ ಹಿಂದೆ ಧಾರ್ಮಿಕ ದೇಗುಲಗಳ ವೈದೀಕ ವಿಧಾನದ ಪದ್ಧತಿಯಂತೆ ಆಧುನಿಕ ಶೈಲಿಯಲ್ಲೂ ಮರು ನಿರ್ಮಾಣ ಮಾಡಲಾಗಿದೆ.

ದೇವಸ್ಥಾನ ಆಡಳಿತ ಮಂಡಳಿ ₹ 50 ಲಕ್ಷ ಮೊತ್ತದಲ್ಲಿ ನೂತನ ಅಗ್ನಿಕುಂಡ ನಿರ್ಮಿಸಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಇರುವ ಅಗ್ನಿ ಕುಂಡಗಳಿಗೆ ಇದು ಮಾದರಿಯಾಗಿದೆ. ಪ್ರತಿ ವರ್ಷದ ಜಾತ್ರೆಗೆ ಬರುವ ಭಕ್ತರು ಅಗ್ನಿ ತುಳಿಯಲು ನೂಕುನುಗ್ಗಲಿನಲ್ಲಿ ಚಡಪಡಿಸಬೇಕಾಗಿತ್ತು. ಮೂರು ವರ್ಷಗಳಿಂದ ಸುಲಭವಾಗಿ ಅಗ್ನಿ ತುಳಿದು ಬರುವ ವ್ಯವಸ್ಥೆ ಮಾಡಲಾಗಿದೆ.

‘106 ಅಡಿ ವಿಸ್ತೀರ್ಣದ 50 ಅಡಿ ಸುತ್ತಳತೆಯಲ್ಲಿ ದುಂಡಾಗಿ ಅಗ್ನಿಕುಂಡ ನಿರ್ಮಿಸಿರುವುದೇ ಇದರ ಪ್ರಮುಖ ವೈಶಿಷ್ಟ್ಯವಾಗಿದೆ’ ಎಂದು ವೀರಭದ್ರೇಶ್ವರ ದೇವಾಲಯದ ಸ್ಥಳೀಯ ಸಮಿತಿಯ ಅಧ್ಯಕ್ಷ ವೀರಣ್ಣ ಪಾಟೀಲ ಹೇಳುತ್ತಾರೆ.

ADVERTISEMENT

ಅಗ್ನಿಕುಂಡದ ಒಳಗಡೆ ಭಕ್ತರು ಬರಲು ಒಂದು ದ್ವಾರ, ಅಗ್ನಿ ತುಳಿದು ಹೊರಹೋಗಲು ಇನ್ನೊಂದು ದ್ವಾರ ನಿರ್ಮಿಸಿರುವ ಕಾರಣ ಎಲ್ಲರಿಗೂ ಕಡಿಮೆ ಅವಧಿಯಲ್ಲಿ ದರ್ಶನ ಭಾಗ್ಯ ಕಲ್ಪಿಸಿದಂತಾಗಿದೆ.

‘ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಾಲಯದ ಹಣದಲ್ಲಿ ಶಾಸಕ ರಾಜಶೇಖರ ಪಾಟೀಲ ಅವರ ಇಚ್ಛಾಶಕ್ತಿಯಿಂದ ಅಗ್ನಿಕುಂಡ ನಿರ್ಮಿಸಲಾಗಿದೆ. ರಾಜಸ್ಥಾನದಿಂದ ಖರೀದಿಸಿದ ಮಾರ್ಬಲ್‌ನಿಂದ ಅಗ್ನಿಕುಂಡದ ಸುತ್ತಲು ಕೆಳಹಾಸು ಹಾಕಲಾಗಿದೆ. ಕುಂಡದ ಮುಖ್ಯ ದ್ವಾರದಿಂದ ಈ ಬಾರಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ನೇರವಾಗಿ ವಿಶೇಷ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಜಾತ್ರಾ ಸಮಿತಿಯ ಪ್ರಮುಖ ಮಾಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.