ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯು 16 ದಿನಗಳ ಕಾಲ ನಡೆಯುತ್ತದೆ. ಜ.10ರಂದು ಪಟ್ಟಣದ ಮುತ್ತೈದೆಯರು ಕಾಳಿಕಾ ಮಾತೆ ಹಾಗೂ ವೀರಭದ್ರೇಶ್ವರ ದೇವರ ಮೂರ್ತಿಗಳನ್ನು ಮಧುಮಕ್ಕಳಂತೆ ಸಿಂಗಾರ ಮಾಡಿ ಎಣ್ಣೆ ಹಚ್ಚುವ
ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಮಕರ ಸಂಕ್ರಾಂತಿ ಹಬ್ಬದಂದು ಸಂಜೆ ಹನುಮಂತನ ದೇವಸ್ಥಾನದ ಆವರಣದಲ್ಲಿ ಶಲ್ಯ ಸುಡುವುದು,
ಬಳಿಕ ಪಲ್ಲಕ್ಕಿ ಮೆರವಣಿಗೆ ಮೂಲಕ ರಥ ಮೈದಾನದ ಐತಿಹಾಸಿಕ ವೀರಭದ್ರೇಶ್ವರ ಅಗ್ನಿಕುಂಡದಲ್ಲಿ ಶಲ್ಯ ಸುಡಲಾಯಿತು.
ಜ.15ರಿಂದ 19ರ ವರೆಗೆ ವೀರಭದ್ರೇಶ್ವರ ಉತ್ಸವ ಮೂರ್ತಿ ಹಾಗೂ ಸಾಂಪ್ರದಾಯಿಕ ಕಟ್ಟಿಗೆಯ ಆನೆ ಮರೆವಣಿಗೆ ಜರುಗಿತು. 20ರಿಂದ 24 ವರೆಗೆ ಉಚ್ಚಾಯಿ ಮೆರವಣಿಗೆ ನಡೆಯಿತು. ಜ.24ರಂದು ರಾತ್ರಿ ನಡೆದ ಮೆರವಣಿಗೆ ಪ್ರಮುಖ ಹಾಗೂ ಆಕರ್ಷಣೆಯಾಗಿತ್ತು. ಉಗ್ರ ರೂಪದ ಕಾಶಿ ಕಟ್ಟಿದ ಮೂರ್ತಿ ಮೆರವಣಿಗೆಯಲ್ಲಿ ಪುರವಂತರು ಒಡಪುಗಳನ್ನು ಹೇಳುತ್ತಾ ಸಾಗಿದರು. ಮಧ್ಯರಾತ್ರಿಯಲ್ಲಿ ಹೊರಬರುವ ದೇವರ
ಮೆರವಣಿಗೆ ನೋಡುಗರ ಕಣ್ಮನ ಸೆಳೆಯುತ್ತದೆ.
ದೇವರ ಕೊರಳಲ್ಲಿ ರುಂಡಮಾಲೆ, ಕೈಯಲ್ಲಿ ಖಡ್ಗ, ಬಿಚ್ಚಿದ ಜಡೆ, ಕಣ್ಣಲ್ಲಿ ಭೀಕರತೆ, ಯುದ್ಧಕ್ಕೆ ಸನ್ನದ್ಧನಾದ ರೂಪದಲ್ಲಿ ವೀರಭದ್ರೇಶ್ವರ ದೇವರ ಅಲಂಕಾರ ನೋಡುವುದೇ ಒಂದು ವಿಶೇಷವಾಗಿದೆ.
25ರಂದು ಅಗ್ನಿಕುಂಡಕ್ಕೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ಸಂಜೆ 7 ಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ ರಾತ್ರಿ ಮೂರು ನಾಲ್ಕು ಗಂಟೆಗೆ ಅಗ್ನಿಕುಂಡ ದತ್ತ ಆಗಮಿಸುತ್ತದೆ. ಒಂದು ಬಾರಿ ಅಗ್ನಿ ತುಳಿದರೆ ತಪ್ಪದೆ ಜಾತ್ರೆಗೆ ಆಗಮಿಸಿ ಅಗ್ನಿ ತುಳಿಯಲೇಬೇಕು ಎನ್ನುವ ಸಂಪ್ರದಾಯವಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರು ಅಲ್ಲದೆ ಊರು ಬಿಟ್ಟು ಬೇರೆ ನಗರ ಪ್ರದೇಶಗಳಲ್ಲಿ ವಾಸಿಸುವವರು ಕೂಡ ಜಾತ್ರೆಗೆ ಆಗಮಿಸಿ ಅಗ್ನಿ ತುಳಿಯುತ್ತಾರೆ. ಅಗ್ನಿ ತುಳಿದ ಬಳಿಕ ವೀರಭದ್ರೇಶ್ವರ ದೇವರ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮಾರ್ಗವಾಗಿ ದೇವಸ್ಥಾನಕ್ಕೆ ಮರಳುತ್ತದೆ.
ಜ.26ರಂದು ಸಂಭ್ರಮದಿಂದ ರಥೋತ್ಸವ ಜರುಗುತ್ತದೆ. ಈ ರಥೋತ್ಸವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತರು ಪಾಲ್ಗೊಳ್ಳುತ್ತಾರೆ. ಲಕ್ಷಾಂತರ ಜನರ ಮಧ್ಯೆ ರಥ ಎಳೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.