ADVERTISEMENT

ಹುಮನಾಬಾದ್: ನೋಡುಗರ ಕಣ್ಮನ ಸೆಳೆಯುವ ವೀರಭದ್ರೇಶ್ವರ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:52 IST
Last Updated 26 ಜನವರಿ 2023, 4:52 IST
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಕೆತ್ತಲಾದ ಶಿಲ್ಪ ಕಲೆಗಳು
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಕೆತ್ತಲಾದ ಶಿಲ್ಪ ಕಲೆಗಳು   

ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಾಲಯವು ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ವೀರಭದ್ರೇಶ್ವರ ದೇವಾಲಯ ಅತ್ಯಂತ ಪುರಾತನವಾಗಿದ್ದು, ಆಕರ್ಷಕ ಶಿಲ್ಪಕಲೆಗೂ ಹೆಸರುವಾಸಿಯಾಗಿದೆ. ದೇವಸ್ಥಾನದ ಹಲವು ರಚನೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಲಾಗಿದ್ದು, ನೋಡಲು ಅತ್ಯಾಕರ್ಷಕವಾಗಿ ಕಾಣುತ್ತವೆ. ಹಲವು ಪೌರಾಣಿಕ ಕಥೆ-ಪಾತ್ರ ಗಳನ್ನು ಗೋಡೆಗಳ ಮೇಲೆ, ದೇವಸ್ಥಾನದ ಶಿಖರದ ಮೇಲೆ ಸೂಕ್ಷ್ಮವಾಗಿ ಹಾಗೂ ಅಷ್ಟೇ ಸುಂದರವಾಗಿ ಬಿಡಿಸ ಲಾಗಿದೆ. ಯಾವುದೇ ಆಧುನಿಕ ಉಪಕರಣಗಳಿಲ್ಲದ ಆ ಕಾಲದಲ್ಲೇ ಅಂದಿನ ಶಿಲ್ಪಿಗಳು ತಮ್ಮ ಬಳಿಯಿದ್ದ ಪಾರಂಪರಿಕ ಉಪಕರಣಗಳಿಂದ ಕೆತ್ತಿದ್ದಾರೆ.

ವೀರಭದ್ರೇಶ್ವರ ದೇವಸ್ಥಾನವು ಉತ್ತರ ನಾಗರಶೈಲಿ ಹಾಗೂ ದಕ್ಷಿಣದ ದ್ರಾವಿಡ ಪದ್ಧತಿಗಳ ಸಂಗಮದಂತಿದೆ. ಗರ್ಭ ಗೋಪುರ ಹಿಮಾಲಯ ಕೇದಾರ, ಓರಿಸ್ಸಾದ ಭುವನೇಶ್ವರಿ ದೇವಾಲಯ ಗಳನ್ನು ನೆನಪಿಗೆ ತಂದರೆ, ಮುಖ್ಯ ದ್ವಾರದ ಮೇಲ್ಭಾಗದ ವಿನ್ಯಾಸ ದಕ್ಷಿಣದ ಮಧುರೈ, ಕಂಚಿ ದೇವಾಲಯಗಳನ್ನು ನೆನಪಿಸುತ್ತವೆ. ಪೂರ್ವದ್ವಾರದ ಮೇಲೆ ಆದಿಕೇಶವನ ಕೆಳಗೆ ದೇವರ ಮೂರ್ತಿ ಇದೆ. ನಾಲ್ಕು ದಿಕ್ಕುಗಳಲ್ಲಿ ನಂದಿಗಳಿವೆ. ಮೊದಲನೇ ಸಾಲಿನ ಮಧ್ಯದಲ್ಲಿ ಪಾಂಡುರಂಗ ವಿಠ್ಠಲ ಸೊಂಟದ ಮೇಲೆ ಕೈಯಿಟ್ಟು ಭಕ್ತರ ಅಭಿಲಾಷೆಗಳನ್ನು ಪೂರ್ಣಗೊಳಿಸಲು ನಿಂತಂತಿದೆ. ಎರಡೂ ಕೊನೆಗಳಲ್ಲಿ ಗರುಡ ಹಾಗೂ ಹನುಮಂತ ಕೈ ಜೋಡಿಸಿ ನಿಂತಿದ್ದಾರೆ. ಹಾಗೆಯೇ ಕೆಳಗಿನ ಸಾಲುಗಳಲ್ಲಿ ಪುರಾಣಗಳ ಘಟನೆಗಳನ್ನು, ನಾನಾ ದೇವತೆಗಳನ್ನು ಕೆತ್ತಲಾಗಿದೆ. ದೊಡ್ಡಗಚ್ಚು-ಗಾರೆಯ ಕಿಟಕಿಗಳಲ್ಲಿ ಹೂ ಕುಂಡಗಳನ್ನು ರಚಿಸಲಾಗಿದೆ.

ADVERTISEMENT

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಅಲ್ಲಿನ ವಿಶೇಷತೆ ಕುರಿತು ತಿಳಿದುಕೊಂಡು ಕುತೂಹಲದಿಂದ ದೇವಾಲಯ ವೀಕ್ಷಿಸುತ್ತಾರಲ್ಲದೆ ಇಲ್ಲಿನ ಶಿಲ್ಪಕಲೆಯನ್ನು ಬೆರಗುಗಣ್ಣಿನಿಂದ ನೋಡಿ ಸಂತಸಪಡುತ್ತಾರೆ.

ರಹಸ್ಯದ ಬೃಹತ್ ಸ್ತಂಭ: ಪ್ರವೇಶ ದ್ವಾರದ ಎಡ ಮತ್ತು ಬಲ ಬದಿಗೆ ಎರಡು ದೊಡ್ಡ ಕಂಬಗಳಿವೆ. ಈ ಪೈಕಿ ಎಡಕ್ಕಿರುವುದೇ ಉಯ್ಯಾಲೆ ದೀಪ ಸ್ತಂಭ. ಮಹಡಿಯ ಮೇಲೆ ಹೋಗಿ ಇದರ ಮೇಲ್ತುದಿಯನ್ನು ಸಣ್ಣ ಮಕ್ಕಳೂ ಕೂಡ ಅಲ್ಲಾಡಿಸಿದರೆ ಸಿಂಗ್‌ನ ಗೊಂಬೆಯಂತೆ ಅಲ್ಲಾಡುವ ಉಯ್ಯಾಲೆ ಕಂಬ ಇದಾಗಿದೆ. ಸುಮಾರು 5 ಟನ್‌ಗಳಿಗೂ ಹೆಚ್ಚಿನ ಭಾರ ಇರುವ ಈ ಬೃಹತ್ ಸ್ತಂಭ ಅಲ್ಲಾಡುವುದರ ರಹಸ್ಯವೇನೆಂದು ಈ ವರೆಗೆ ಅನೇಕ ಎಂಜಿನಿಯರ್‌ಗಳು, ಕಟ್ಟಡ ತಂತ್ರಜ್ಞರಿಗೂ ತಿಳಿದಿಲ್ಲ. ಹೀಗಿರಬಹುದು ಎಂದು ಊಹೇ ಮಾಡಲಾಗುತ್ತದೆ ವಿನಃ ಖಚಿತವಾಗಿ ಹೇಳುವುದಿಲ್ಲ. ಇಂದಿನ ವೈಜ್ಞಾನಿಕ ಯುಗದಲ್ಲಿ ಈ ಕಂಬದ ರಹಸ್ಯ ನಿಜಕ್ಕೂ ಸವಾಲಾಗಿದೆ. ಜಗತ್ತಿನ ಆಶ್ಚರ್ಯಕರ ವಸ್ತುಗಳ ಪಟ್ಟಿಗೆ ಇದನ್ನು ಸೇರಿಸಬಹುದಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಾರೆ.

ದುಷ್ಟರ ಸಂಹಾರಕ

ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ದುಷ್ಟರ ಸಂಹಾರಕ, ಶಿಷ್ಟರ ಪರಿಪಾಲಕನಾದ ವೀರಭದ್ರೇಶ್ವರ ದೇವರು ನೆಲೆ ನಿಂತು ಈ ಸ್ಥಳ ಪುಣ್ಯಕ್ಷೇತ್ರವಾಗಿ ರೂಪುಗೊಂಡಿದೆ.

ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನ ವೀರಭದ್ರೇಶ್ವರ ದೇವರನ್ನು ನೆನೆಯುತ್ತಾರೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಆದರೆ ವೀರಭದ್ರೇಶ್ವರ ಜಾತ್ರೆ ಎಂದರೆ ಎಲ್ಲರಿಗೂ ನೆನಪಾಗುವುದು ಹುಮನಾಬಾದ್ ಪಟ್ಟಣ ಮಾತ್ರ.

ವಿಜಯನಗರ ಅರಸರ ಕಾಲದಲ್ಲೂ ಸಹ ವೀರಭದ್ರೇಶ್ವರರನ್ನು ಯುದ್ಧದ ಆದಿ ದೇವತೆಯನ್ನಾಗಿ ಪೂಜಿಸಲಾಗುತ್ತಿತ್ತು ಎಂಬುದಕ್ಕೆ ಇತಿಹಾಸದ ಉಲ್ಲೇಖವಿದೆ. ಈಗಲೂ ಹಂಪಿಯಲ್ಲಿ ಉದ್ದಾನ ವೀರಭದ್ರ ಎಂಬ ಪ್ರಸಿದ್ಧ ದೇವಾಲಯವಿದೆ. ಅನಾದಿ ಕಾಲದಿಂದಲೂ ವೀರಭದ್ರ ಕೋಟಿ ಕೋಟಿ ಭಕ್ತರ ಪಾಲಿಗೆ ಆರಾಧ್ಯ ದೇವನಾಗಿ ಭಕ್ತರ ಇಷ್ಟಾರ್ಥ ನೆರವೇರಿಸುವ ಕಲ್ಪವೃಕ್ಷನಾಗಿದ್ದಾನೆ. 108 ಮಠಗಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಅಂದಿನ ಜಯಸಿಂಹ ನಗರವೇ ಇಂದಿನ ಹುಮನಾಬಾದ್ ಪಟ್ಟಣ. ಹೊನ್ನಪ್ಪ ರಾಜ್ಯದಲ್ಲಿಯೇ 108 ಮಠ ಹೊಂದಿದ ಏಕೈಕ ಪಟ್ಟಣ ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.