ಜನವಾಡ: ‘ಮೂಕ ಪ್ರಾಣಿಗಳ ವೇದನೆ ಅರಿತು ಚಿಕಿತ್ಸೆ ನೀಡುವ ಪಶು ವೈದ್ಯರ ಸೇವೆ ಶ್ರೇಷ್ಠವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ತಿಳಿಸಿದರು.
ಬೀದರ್ ತಾಲ್ಲೂಕಿನ ಕಮಠಾಣ ಬಳಿ ಇರುವ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಹಾವಿದ್ಯಾಲಯದ 36ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಶು ವೈದ್ಯಕೀಯ ವಿಶ್ವವಿದ್ಯಾಲಯ ಬೀದರ್‌ನಲ್ಲಿ ಇರುವುದೇ ಒಂದು ಹೆಮ್ಮೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಬೀದರ್‌ನಲ್ಲಿ ವ್ಯಾಸಂಗ ಮಾಡುತ್ತಿರುವುದು ಸಂತಸದ ಸಂಗತಿ’ ಎಂದು ಹೇಳಿದರು.
‘ಪಶು ವೈದ್ಯಕೀಯ ಮಹಾವಿದ್ಯಾಲಯದಿಂದ ಗ್ರಾಮೀಣಾಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕುರಿ ಮತ್ತು ಮೇಕೆಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಿದೆ’ ಎಂದು ತಿಳಿಸಿದರು.
ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ,‘ವಿಶ್ವವಿದ್ಯಾಲಯದಲ್ಲಿ ಪಠ್ಯಕ್ರಮದ ಜತೆಗೆ ಪ್ರಯೋಗಕ್ಕೂ ಹೆಚ್ಚು ಒತ್ತು ಕೊಡಬೇಕು. ವಿಶ್ವವಿದ್ಯಾಲಯವು ದೇಶಕ್ಕೆ ಮಾದರಿಯಾಗುವ ದಿಸೆಯಲ್ಲಿ ಎಲ್ಲರೂ ಜತೆಗೂಡಿ ಕೆಲಸ ಮಾಡಬೇಕು’ ಎಂದು ನುಡಿದರು.
‘ನಾನೂ ಪಶು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಯಾಗಿದ್ದೆ. ಡೇರಿ ಫಾರ್ಮ್ ಆರಂಭಿಸಬೇಕು ಎನ್ನುವುದು ನನ್ನ ತಂದೆಯ ಆಸೆಯಾಗಿತ್ತು’ ಎಂದು ತಮ್ಮ ಮನದಾಳವನ್ನು ಹಂಚಿಕೊಂಡರು.
‘ವಿಶ್ವವಿದ್ಯಾಲಯದಲ್ಲಿನ ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.
ಮಹಾವಿದ್ಯಾಲಯದ ಡೀನ್ ಡಾ.ದಿಲೀಪಕುಮಾರ ವರದಿ ವಾಚನ ಮಾಡಿದರು. ಮುಖಂಡ ಪಂಡಿತರಾವ್ ಚಿದ್ರಿ ಇದ್ದರು. ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಸಿ.ವೀರಣ್ಣ ಸ್ವಾಗತಿಸಿದರು. ಡಾ.ಎಂ.ಡಿ.ಸೂರಣಗಿ ನಿರೂಪಿಸಿದರು. ರಮೇಶ ಬಡಿಗೇರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.