ADVERTISEMENT

ಪ್ರವಚನದಿಂದ ಮಾನಸಿಕ ಸದೃಢತೆ

ಮೂರು ವಾರದ ಪ್ರವಚನದ ಉದ್ಘಾಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 16:23 IST
Last Updated 5 ನವೆಂಬರ್ 2024, 16:23 IST
ಬಸವಕಲ್ಯಾಣದಲ್ಲಿ ಸೋಮವಾರ ಅನುಭವ ಮಂಟಪ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿದರು. ಬಸವಲಿಂಗ ಪಟ್ಟದ್ದೇವರು, ಮನಗುಂಡಿ ಬಸವಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ಅನುಭವ ಮಂಟಪ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿದರು. ಬಸವಲಿಂಗ ಪಟ್ಟದ್ದೇವರು, ಮನಗುಂಡಿ ಬಸವಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಪ್ರವಚನ ಕೇಳುವುದರಿಂದ ಮತ್ತು ಯೋಗ ಸಾಧನೆಯಿಂದ ಮಾನಸಿಕವಾಗಿ ಸದೃಢರಾಗಬಹುದು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅಭಿಪ್ರಾಯಪಟ್ಟರು.

ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಅನುಭವ ಮಂಟಪ ಉತ್ಸವದ ಅಂಗವಾಗಿ ಮೂರು ವಾರ ನಡೆಯುವ ಆರೋಗ್ಯ ಆಧ್ಯಾತ್ಮ ಪ್ರವಚನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾನಸಿಕ ಸ್ಥಿತಿ ಸರಿ ಇಲ್ಲದಿದ್ದರೆ ದೇಹಕ್ಕೆ ರೋಗಗಳು ಅಂಟಿಕೊಳ್ಳುತ್ತವೆ. ಕೋವಿಡ್ ಸಮಯದಲ್ಲಿ ರೋಗ ಬರದಿದ್ದರೂ ಏನಾಗುತ್ತದೋ ಎಂದು ಹೆದರಿಯೇ ಅನೇಕರು ಪ್ರಾಣ ಕಳೆದುಕೊಂಡರು. ಮಾನಸಿಕ ಸ್ಥೈರ್ಯ ಇಲ್ಲದಿದ್ದರೆ ಏನೂ ಮಾಡಲಾಗುವುದಿಲ್ಲ. ಅಧಿಕಾರಿಗಳು, ರಾಜಕೀಯ ಮುಖಂಡರು ಅಷ್ಟೇ ಅಲ್ಲ, ಶಾಲಾ ಮಕ್ಕಳು ಸಹ ಒತ್ತಡದಲ್ಲಿ ಬದುಕುತ್ತಿದ್ದಾರೆ’ ಎಂದರು.

ADVERTISEMENT

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಭೌತಿಕ ಸುಖ, ಸಾಧನಗಳು ಸಾಕಷ್ಟಿದ್ದರೂ ಅಂತರಂಗದ ಸುಖ, ಶಾಂತಿ ಇಲ್ಲದಂತಾಗಿದೆ. ಮನಗುಂಡಿಯ ಬಸವಾನಂದರು ಉತ್ತಮ ಪ್ರವಚನಕಾರರಾಗಿದ್ದಾರೆ. ಅವರು ಹೇಳುವ ಶರಣರ ತತ್ವ, ಸಂದೇಶ ಆಲಿಸಿದರೆ ಮಾನಸಿಕ ನೆಮ್ಮದಿ ದೊರಕಬಲ್ಲದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮೌಲಿಕ ವಿಚಾರಗಳನ್ನು ಅವರು ನಮಗೆ ಹೇಳಲಿದ್ದಾರೆ’ ಎಂದರು.

ಹುಲಸೂರ ಶಿವಾನಂದ ಸ್ವಾಮೀಜಿ, ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ, ವಿಶ್ವನಾಥ ಮುಕ್ತಾ, ಸೋನಾಲಿ ನೀಲಕಂಠೆ ಮಾತನಾಡಿದರು.

ಭಾಲ್ಕಿ ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ, ಡಾ.ಎಸ್.ಬಿ.ದುರ್ಗೆ ಹಾಗೂ ಸಿಪಿಐ ಅಲಿಸಾಬ್ ಉಪಸ್ಥಿತರಿದ್ದರು.

ನಡಿಗೆಯಿಂದ ಉತ್ತಮ ಆರೋಗ್ಯ

ಬಸವಕಲ್ಯಾಣ: ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಅನುಭವ ಮಂಟಪ ಉತ್ಸವದ ಅಂಗವಾಗಿ ಮೂರು ವಾರ ನಡೆಯುವ ಆರೋಗ್ಯ ಆಧ್ಯಾತ್ಮ ಪ್ರವಚನದ ಪ್ರಥಮ ದಿನ ಮನಗುಂಡಿ ಬಸವಾನಂದರು ಮಾತನಾಡಿ‘ಪ್ರತಿದಿನ ಬೆಳಿಗ್ಗೆ ನಡೆಯುವುದರಿಂದ (ವಾಕಿಂಗ್) ಉತ್ತಮ ಆರೋಗ್ಯ ದೊರಕುತ್ತದೆ’ ಎಂದರು. ಅದಕ್ಕಾಗಿಯೇ ನಡಿಗೆ ವ್ಯಾಯಾಮದ ರಾಜ ಎಂಬುದು ತಜ್ಞರ ಅನಿಸಿಕೆ. ಪ್ರತಿದಿನ ಯೋಗಾಭ್ಯಾಸವೂ ಬೇಕು. ಕಾಲು ಬಿಸಿ ಇರಬೇಕು. ಹೊಟ್ಟೆ ಮೃದು ಇರಬೇಕು. ಈಚೆಗೆ ಕೆಟ್ಟ ಆಹಾರ ಪದ್ಧತಿಯಿಂದ ಹೊಟ್ಟೆ ಉಬ್ಬರ ಗ್ಯಾಸ್ ಹಿಡಿಯುವುದು ಹೆಚ್ಚುತ್ತಿದೆ. ಇದು ಅನಾರೋಗ್ಯದ ಲಕ್ಷಣ. ಮಾನಸಿಕ ಮತ್ತು ದೈಹಿಕವಾಗಿ ಸ್ವಸ್ಥ ಇದ್ದವರು ಮಾತ್ರ ಏನನ್ನಾದರೂ ಸಾಧಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.