ADVERTISEMENT

ಬೀದರ್: ವಿವಿಧೆಡೆ ಪಲ್ಲಕ್ಕಿ, ದೇವಿಮೂರ್ತಿ ಮೆರವಣಿಗೆ, ರಾವಣ ದಹನ

ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ವಿಜಯ ದಶಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 13:25 IST
Last Updated 5 ಅಕ್ಟೋಬರ್ 2022, 13:25 IST
ವಿಜಯ ದಶಮಿ ಪ್ರಯುಕ್ತ ಬೀದರ್‌ನ ಒಳಕೋಟೆಯಲ್ಲಿ ಸ್ಥಾಪಿಸಿದ್ದ ಭವಾನಿದೇವಿ ಮೂರ್ತಿ ಮೆರವಣಿಗೆ ನಡೆಯಿತು
ವಿಜಯ ದಶಮಿ ಪ್ರಯುಕ್ತ ಬೀದರ್‌ನ ಒಳಕೋಟೆಯಲ್ಲಿ ಸ್ಥಾಪಿಸಿದ್ದ ಭವಾನಿದೇವಿ ಮೂರ್ತಿ ಮೆರವಣಿಗೆ ನಡೆಯಿತು   

ಬೀದರ್: ಜಿಲ್ಲೆಯ ವಿವಿಧೆಡೆ ವಿಜಯ ದಶಮಿ ಪ್ರಯುಕ್ತ ಸೀಮೋಲ್ಲಂಘನೆ, ದೇವಿ ಮಂದಿರಗಳಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದವು.

ನವಮಿದಿನ ಮಂದಿರಗಳಲ್ಲಿ ಆಯುಧ, ಗಜ ಹಾಗೂ ಅಶ್ವ ಪೂಜೆಗಳು ಜರುಗಿದವು. ಭಕ್ತರು ದೇವಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ವಿಜಯ ದಶಮಿಯ ದಿನ ಮಹಿಳೆಯರು ಬೆಳಗಿನ ಜಾವ ಆರತಿ ಹಿಡಿದು ದೇವಿ ಮಂದಿರಕ್ಕೆ ನಡಿಗೆಯಲ್ಲಿ ಬಂದು ದೇವರಿಗೆ ಬನ್ನಿ ಮುಡಿಸಿದರು. ಸಂಜೆ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ಬನ್ನಿ ಸಮರ್ಪಿಸಿದರು.

ಮಂಗಲಪೇಟೆಯ ಭವಾನಿ ಮಂದಿರ, ಕೇಂದ್ರ ಬಸ್‌ ನಿಲ್ದಾಣ ಸಮೀಪದ ದೇವಿ ಮಂದಿರ, ಸರ್ವಿಸ್‌ ಸ್ಟಾಂಡ್‌ ಭವಾನಿ ದೇವಿ ಮಂದಿರ, ಬ್ರಹ್ಮನವಾಡಿ, ದರ್ಜಿಗಲ್ಲಿ ಹಾಗೂ ಬೆನಕನಹಳ್ಳಿ ದುರ್ಗಾದೇವಿ ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

ADVERTISEMENT

ಮನೆಗಳಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಮನೆಗಳಲ್ಲಿ ಪ್ರತಿಷ್ಠಾಪಿಸಿದ ಘಟ್ಟಗಳಲ್ಲಿ ಮೊಳಕೆಯೊಡೆದಿದ್ದ ಸಸಿ ಹಾಗೂ ಬನ್ನಿ ಎಲೆಗಳನ್ನು ಭಕ್ತರು ದೇವರ ಮುಡಿಗೇರಿಸಿ ಭಕ್ತಿ ಸಮರ್ಪಣೆ ಮಾಡಿದರು. ಅನೇಕರು ದೇವರಿಗೆ ಹೋಳಿಗೆ ನೈವೇದ್ಯ ಸಮರ್ಪಿಸಿದರು. ಸಂಜೆ ಕುಟುಂಬದ ಸದಸ್ಯರೊಂದಿಗೆ ಬಂಧು ಬಳಗದವರ ಮನೆಗೆ ತೆರಳಿ ಬನ್ನಿ ಎಲೆಗಳನ್ನು ಕೊಟ್ಟು ಹಬ್ಬದ ಶುಭಾಶಯ ಕೋರಿದರು.

ಮುಜರಾಯಿ ಇಲಾಖೆಯ ಬೀದರ್‌ ವಿಭಾಗದ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್‌ ಕುಲಕರ್ಣಿ ನೇತೃತ್ವದಲ್ಲಿ ನರಸಿಂಹ ಝರಣಾ ಗುಹಾ ದೇಗುಲ, ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಹಾಗೂ ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದವು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂದ ಸೇವಕರು ನಗರದ ಗುಂಪಾದಲ್ಲಿ ಮಂಗಳವಾರ ಸಂಜೆ ಲಾಠಿ ಹಿಡಿದು ಶ್ವೇತ ವರ್ಣದ ಅಂಗಿ, ಖಾಕಿ ಪ್ಯಾಂಟ್ ಹಾಗೂ ಕಪ್ಪು ಟೊಪ್ಪಿಗೆ ಧರಿಸಿ ಪಥ ಸಂಚಲನ ನಡೆಸಿದರು. ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕರು ಹೂವಿನ ಸುರಿಮಳೆ ಗೈದರು.

ಭವಾನಿ ದೇವಿ ಭವ್ಯ ಮೆರವಣಿಗೆ

ಬೀದರ್‌: ಐತಿಹಾಸಿಕ ಬೀದರ್‌ ಕೋಟೆಯೊಳಗಿನ ಭವಾನಿ ಮಂದಿರದಲ್ಲಿ ನವರಾತ್ರಿಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬುಧವಾರ ಒಳಕೋಟೆಯ ದೇವಿ ಮಂದಿರದ ಆವರಣದಿಂದ ಓಲ್ಡ್‌ಸಿಟಿಯ ಶಹಾಗಂಜ್‌ ಹನುಮಾನ ಮಂದಿರದ ವರೆಗೆ ಭವಾನಿ ದೇವಿಯ ಮೆರವಣಿಗೆ ನಡೆಯಿತು. ಟ್ರ್ಯಾಕ್ಟರ್‌ನಲ್ಲಿ ವಿಶೇಷ ಮಂಟಪ ನಿರ್ಮಿಸಿ ಅದರಲ್ಲಿ ಸಿಂಹಾರೂಢ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮುಂಚೂಣಿಯಲ್ಲಿದ್ದ ಹಲಗೆ ಮೇಳದವರ ವಾದನಕ್ಕೆ ಮಂಗಳಮುಖಿಯರು ನೃತ್ಯ ಮಾಡಿ ಗಮನ ಸೆಳೆದರು.

ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಗರದಲ್ಲಿ ರಾವಣ ದಹನ

ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ವಿಜಯದಶಮಿ ಪ್ರಯುಕ್ತ ಬೀದರ್ ನಗರದ ಸಾಯಿ ಆದರ್ಶ ಶಾಲೆಯ ಆವರಣದಲ್ಲಿ 50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ ಮಾಡಲಾಯಿತು. ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಮಹಿಳೆಯರು ಹಾಗೂ ಪುರುಷರಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ನೆಹರೂ ಸ್ಟೇಡಿಯಂ ರಸ್ತೆಯಲ್ಲಿ ಸಂಚಾರ ಒತ್ತಡ ಹೆಚ್ಚಾದ ಕಾರಣ ವಾಹನ ಮಾರ್ಗಗಳನ್ನು ಬದಲಾವಣೆ ಮಾಡಲಾಗಿತ್ತು. ವಿಶೇಷ ಪೊಲೀಸ್‌ ಕಾರ್ಯಪಡೆ, ಜಿಲ್ಲಾ ಸಶಸ್ತ್ರಪಡೆ, ಮಹಿಳಾ ಪೊಲೀಸರು ಬಂದೋಬಸ್ತ್‌ ಮಾಡಿದ್ದರು.

ಶ್ರೀ ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್, ಅಧ್ಯಕ್ಷ ಚಂದ್ರಶೇಖರ ಗಾದಾ, ರಾಜಕುಮಾರ ಅಗರವಾಲ್, ನಿಲೇಶ್ ರಕ್ಷಾಳ್, ಮಹೇಶ್ವರ ಸ್ವಾಮಿ, ಅನಿಲ ರಾಜಗೀರಾ, ಸುನೀಲ್ ಕಟಗಿ, ಶಂಕರ ಕೊಟ್ಟರಕಿ, ವಿನೋದ ಪಾಟೀಲ, ರಾಜುಕುಮಾರ ಜಮಾದಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.