ಬೀದರ್: ವಕ್ಫ್ ವಿವಾದದ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ತಂಡ ಸೋಮವಾರ ಜಿಲ್ಲೆಗೆ ಭೇಟಿ ನೀಡಿದೆ.
ಆದರೆ, ಬಿಜೆಪಿಯ ನಾಲ್ವರು ಶಾಸಕರು, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ತಂಡದ ಕಡೆಗೆ ಸುಳಿಯಲಿಲ್ಲ. ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಹೊರತುಪಡಿಸಿ ಬಿಜೆಪಿಯ ಯಾವುದೇ ಮುಖಂಡರು ಬಂದಿರಲಿಲ್ಲ.
ನಗರ ಹೊರವಲಯದ ನರಸಿಂಹ ಝರಣಿ ದೇವಸ್ಥಾನಕ್ಕೆ ಭೇಟಿ ನೀಡಿದ ಯತ್ನಾಳ ತಂಡದ ಮುಖಂಡರು ವಿಶೇಷ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಗೋಶಾಲೆಯಲ್ಲಿ ಗೋವಿಗೆ ಪೂಜೆ ಮಾಡಿದರು.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಬಿ.ಪಿ. ಹರೀಶ್, ಮಾಜಿಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಹಾಜರಿದ್ದರು.
ಬೆಳಿಗ್ಗೆ 8.30ಕ್ಕೆ ನಿಗದಿಯಾಗಿದ್ದ ಯತ್ನಾಳ ತಂಡದ ಭೇಟಿ ಕಾರ್ಯಕ್ರಮ ನಿಗದಿತ ಅವಧಿಗಿಂತ ಎರಡು ಗಂಟೆ ತಡವಾಗಿ ಆರಂಭಗೊಂಡಿತು.
ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಪತ್ರಕರ್ತರೊಂದಿಗೆ ಮಾತನಾಡಿ, ವಕ್ಫ್ ವಿವಾದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಬೀದರ್ ಜಿಲ್ಲೆಯಿಂದ ಆರಂಭಿಸಿದ್ದೇವೆ.
ಹಿಂದೂ, ಮುಸ್ಲಿಂ ಎಲ್ಲರ ಆಸ್ತಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿದ್ದಾರೆ. ವಾರ್ ರೂಂ ಮಾಡಿದ ನಂತರ ಸಾಕಷ್ಟು ಕರೆಗಳು ಬರುತ್ತಿವೆ. ವಕ್ಫ್ ವಿವಾದ ಗಮನಕ್ಕೆ ಬರುತ್ತಿದ್ದಂತೆ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದಲ್ಲಿ ಹೋರಾಟ ನಡೆಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಕೇಂದ್ರ ಸಂಸದೀಯ ಸಮಿತಿ ಕೂಡ ಭೇಟಿ ನೀಡಿತ್ತು. ಮಾಹಿತಿ ಸಂಗ್ರಹಿಸಿ ಕಳಿಸಿಕೊಡುವಂತೆ ತಿಳಿಸಿತ್ತು. ಅವರ ಸೂಚನೆ ಮೇರೆಗೆ ಮಾಹಿತಿ ಸಂಗ್ರಹಿಸಿ, ಜನಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಬೀದರ್ ತಾಲ್ಲೂಕಿನ ಚಟನಳ್ಳಿ, ಧರ್ಮಾಪೂರ ಗ್ರಾಮದ ರೈತರ ಆಸ್ತಿಯಲ್ಲಿ ವಕ್ಫ್ ಎಂದು ನಮೂದಾಗಿದೆ. ಅಲ್ಲಿಗೆ ಕೂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತೇವೆ. ಇದು ಧರ್ಮದ ಕೆಲಸ ಎಂದು ಹೇಳಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು, ಯತ್ನಾಳ ಅವರ ತಂಡಕ್ಕೆ ತಂದೆ, ತಾಯಿ ಇಲ್ಲ. ಅದು ಅನಾಥ ಎಂದು ಟೀಕಿಸಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರವಿಂದ ಲಿಂಬಾವಳಿ, ಯಾರ ತಂದೆ ಯಾರೆಂಬುದು ಗೊತ್ತಾಗುತ್ತೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಪಕ್ಷದ ಸಮ್ಮತಿ ಬಗ್ಗೆ ನಾನು ಮಾತನಾಡಲ್ಲ. ವಕ್ಫ್ ವಿವಾದ ದೊಡ್ಡ ಪಿಡುಗು. ಜನ ತೊಂದರೆಯಲ್ಲಿದ್ದಾರೆ. ಸಲಗರ ಅವರ ಭಾವನೆ ಗೌರವಿಸುತ್ತೇವೆ. ಯಾರ ತಂದೆ ತಾಯಿ ಯಾರೆಂಬುದು ಗೊತ್ತಾಗುತ್ತದೆ. ಬಸವಣ್ಣನ ತತ್ವದಲ್ಲಿ ನಮಗೆ ನಂಬಿಕೆ ಇದೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರ ದೂರಿನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಪಕ್ಷದ ಚಿಹ್ನೆ ಬಳಸುತ್ತಿದ್ದೇನೆಯೇ? ಅವರು ಎಚ್ಚರಿಕೆಯಿಂದ ಮಾತನಾಡಬೇಕು. ಜನಜಾಗೃತಿಯಲ್ಲಿ ಎಲ್ಲರೂ ಭಾಗವಹಿಸಲಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.