ADVERTISEMENT

ವಕ್ಫ್ ಆಸ್ತಿ ವಿವಾದ |ರೈತರಿಗೆ ಅಪಾಯವಾಗುವ ಕೆಲಸ ಮಾಡಲ್ಲ: ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 12:39 IST
Last Updated 30 ಅಕ್ಟೋಬರ್ 2024, 12:39 IST
<div class="paragraphs"><p>ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್‌) ಭೇಟಿ ನೀಡಿ, ಪರಿಶೀಲನೆ ನಡೆಸಿದರು</p></div>

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್‌) ಭೇಟಿ ನೀಡಿ, ಪರಿಶೀಲನೆ ನಡೆಸಿದರು

   

ಬೀದರ್‌: ‘ವಕ್ಫ್‌ ಬೋರ್ಡ್‌ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೈತರಿಗೆ ಅಪಾಯವಾಗುವ ಕೆಲಸ ಮಾಡೊಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.

ನಗರದ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್‌) ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ADVERTISEMENT

ವಕ್ಫ್‌ ಬೋರ್ಡ್‌ ಆಸ್ತಿ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್‌.ಕೆ. ಪಾಟೀಲ ಅವರು ಸ್ಪಷ್ಟೀಕರಣ ನೀಡಿದ್ದಾರೆ. ವಿಜಯಪುರದಲ್ಲಿ ನಡೆದ ಘಟನೆ ಬಗ್ಗೆ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ವಿವರಣೆ ಕೊಟ್ಟಿದ್ದಾರೆ. ರೈತರಿಗೆ ಅಪಾಯವಾಗುವ ಯಾವುದೇ ಕೆಲಸ ಸರ್ಕಾರ ಮಾಡುವುದಿಲ್ಲ. ಬಿಜೆಪಿಯವರು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಒಳಮೀಸಲಾತಿ ಜಾರಿಗೆ ಸಚಿವ ಸಂಪುಟ ಒಪ್ಪಿಕೊಂಡಿದೆ. ಈ ಹಿಂದೆ ಬಿಜೆಪಿ ಸರ್ಕಾರ ಸದಾಶಿವ ಆಯೋಗ ರದ್ದುಪಡಿಸಿದ್ದರಿಂದ ಸರ್ಕಾರದ ಬಳಿ ಅಂಕಿ ಅಂಶ ಇಲ್ಲ. ಅದನ್ನು ಸಂಗ್ರಹಿಸಲು ಆಯೋಗ ರಚಿಸಲಾಗಿದೆ. ಮೂರು ತಿಂಗಳಲ್ಲಿ ಆ ವರದಿ ಕೈಸೇರಿದ ನಂತರ ಒಳಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಬ್ರಿಮ್ಸ್‌ ಹಿಂದಿನ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ ವಿರುದ್ಧ ದೂರುಗಳು ಬಂದದ್ದರಿಂದ ಅವರನ್ನು ಬದಲಾಯಿಸಿದ್ದೇವೆ. ಅವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಗೊತ್ತಾಗಿದೆ. ಆದರೆ, ನ್ಯಾಯಾಲಯದ ಆದೇಶದ ಪ್ರತಿ ಕೈಸೇರಿಲ್ಲ. ಅದು ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬ್ರಿಮ್ಸ್‌ನಲ್ಲಿ ಕೆಲವು ನ್ಯೂನತೆಗಳಿವೆ ಎಂದು ಸ್ಥಳೀಯ ಸಚಿವರು ತಿಳಿಸಿದ್ದರಿಂದ ಅದರ ಪರಿಶೀಲನೆಗೆ ಬಂದಿರುವೆ. ಬರುವ ದಿನಗಳಲ್ಲಿ ಇಲ್ಲಿ ಏನೇನು ಸೌಲಭ್ಯ ಕಲ್ಪಿಸಬಹುದು. ಎಲ್ಲ ವಿಭಾಗಗಳಲ್ಲಿ ಗುಣಮಟ್ಟದ ಚಿಕಿತ್ಸೆಗೆ ಏನೇನು ಬದಲಾವಣೆ ತರಬಹುದು ಎಂದು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮೆಡಿಕಲ್‌ ಕಾಲೇಜು ಸೆಕೆಂಡರಿ ಕೇರ್‌ ಯುನಿಟ್‌ ಆಗಿರುವುದರಿಂದ ನ್ಯೂರೊ ಸರ್ಜನ್‌ ಇಲ್ಲ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಇರುತ್ತಾರೆ. ಆದರೆ, ಬ್ರಿಮ್ಸ್‌ನಲ್ಲಿ ಕಾರ್ಡಿಯೊ ಕ್ಯಾಥ್‌ಲ್ಯಾಬ್‌ ಮಾಡುತ್ತಿದ್ದೇವೆ. ಅದರಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಕರ್ಯ ಸಿಗಲಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು ಬ್ರಿಮ್ಸ್‌ ನೆಲಮಹಡಿಗೆ ತೆರಳಿ ವೀಕ್ಷಿಸಿದರು. ಮಳೆ ನೀರು ಹಾಗೂ ಅಲ್ಲಿರುವ ಬಾವಿಯಿಂದ ನೀರು ಸಂಗ್ರಹಗೊಂಡು ಆಗುತ್ತಿರುವ ಸಮಸ್ಯೆ ಕುರಿತು ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಅವರು ವಿವರಿಸಿದರು. ಬಳಿಕ ಆರನೇ ಮಹಡಿಯ ತೀವ್ರ ನಿಗಾ ಘಟಕಕ್ಕೆ ಭೇಟಿ ಕೊಟ್ಟು ವೈದ್ಯಕೀಯ ಸೌಕರ್ಯಗಳ ಕುರಿತು ರೋಗಿಗಳಿಂದ ಮಾಹಿತಿ ಪಡೆದರು. ಆನಂತರ ನಿರ್ಮಾಣ ಹಂತದ ಕ್ಯಾಥ್‌ಲ್ಯಾಬ್‌ ಪರಿಶೀಲಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಬ್ರಿಮ್ಸ್‌ ಪ್ರಭಾರ ನಿರ್ದೇಶಕಿ ಡಾ. ಶಕುಂತಲಾ ಕೌಜಲಗಿ, ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ, ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್‌ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.