ಬೀದರ್: ‘ಕಾರಂಜಾ ಸಂತ್ರಸ್ತರೊಂದಿಗೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಭೆ ನಡೆಸಿದ್ದರು. ಆದರೆ, ಅವರ ಸಮಸ್ಯೆ ಬಗ್ಗೆ ಬಜೆಟ್‌ನಲ್ಲೇಕೆ ಪ್ರಸ್ತಾಪಿಸಿಲ್ಲ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಪ್ರಸ್ತಾಪಿಸಿದರು.
ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವ ರೈತರು ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಸತತ ಹೋರಾಟ ನಡೆಸುತ್ತಿದ್ದಾರೆ. ಆದರೆ, ಬಜೆಟ್‌ನಲ್ಲಿ ಅವರ ಬಗ್ಗೆ ಚಕಾರ ಎತ್ತಿಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದಾದ್ಯಂತ ತೀವ್ರ ಬರ ಇರುವ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಸರ್ಕಾರದ ಐದು ಗ್ಯಾರಂಟಿಗಳಿಗೆ ಹಣ ಕ್ರೋಢಿಕರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿಗೆ ಅನುದಾನ ನೀಡಲು ನಿರಾಕರಿಸುತ್ತಿದ್ದಾರೆ. ಅಭಿವೃದ್ಧಿ ಕುಂಠಿತಗೊಂಡು ರಾಜ್ಯದ ಎಲ್ಲಾ ಶಾಸಕರು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಗೋದಾವರಿ ಜಲಾನಯನದ ನೀರಿನ ಸದ್ಬಳಕೆ ಮಾಡಿಕೊಂಡು ರೈತರಿಗೆ ಅನುಕೂಲ ಕಲ್ಪಿಸುವ ರೈತರ ಬೇಡಿಕೆಗೆ ಮನ್ನಣೆ ನೀಡಿಲ್ಲ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ಆದರೆ, ಜನದಟ್ಟಣೆ ತಗ್ಗಿಸಲು ಹೆಚ್ಚುವರಿ ಬಸ್‌ಗಳಿಗೆ ವ್ಯವಸ್ಥೆ ಮಾಡಿಲ್ಲ. ನನ್ನ ಮತಕ್ಷೇತ್ರದ ಮನ್ನಾಏಖೇಳ್ಳಿಯಲ್ಲಿ ಅಗ್ನಿಶಾಮಕ ವಾಹನ ಕಚೇರಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನರಸಿಂಹ ಝರಣಿ ಸ್ವಾಮಿ ದೇವಸ್ಥಾನ, ಪಾಪನಾಶ ದೇವಸ್ಥಾನ, ಮೈಲಾರ ಮಲ್ಲಣ್ಣ ದೇವಸ್ಥಾನ, ರೇಕುಳಗಿ ಬೌದ್ಧ ವಿಹಾರ, ಚಾಂಗಲೇರ ವೀರಭದ್ರೇಶ್ವರ ದೇವಸ್ಥಾನ, ಬಾವಗಿ ವೆಂಕಟೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ, ಬಜೆಟ್‌ನಲ್ಲಿ ಅದರ ಪ್ರಸ್ತಾಪ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.