ADVERTISEMENT

ಕಮಲನಗರ | ದಾರಿ ಯಾವುದಯ್ಯ ಶೌಚಾಲಯಕ್ಕೆ?

ಕಮಲನಗರ ಬಸ್‌ ನಿಲ್ದಾಣದ ಮಹಿಳಾ ಶೌಚಾಲಯ ಬಳಕೆಗೆ ಮಹಿಳೆಯರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:33 IST
Last Updated 26 ನವೆಂಬರ್ 2024, 4:33 IST
ಕಮಲನಗರದ ಬಸ್‌ ನಿಲ್ದಾಣದ ಹತ್ತಿರ ಇರುವ ಮಹಿಳಾ ಶೌಚಾಲಯದ ಮುಂದೆ ಸಾಲುಗಟ್ಟಿ ನಿಂತಿರುವ ಆಟೊಗಳು
ಕಮಲನಗರದ ಬಸ್‌ ನಿಲ್ದಾಣದ ಹತ್ತಿರ ಇರುವ ಮಹಿಳಾ ಶೌಚಾಲಯದ ಮುಂದೆ ಸಾಲುಗಟ್ಟಿ ನಿಂತಿರುವ ಆಟೊಗಳು   

ಕಮಲನಗರ: ಪಟ್ಟಣದ ಬಸ್‌ ನಿಲ್ದಾಣದ ಮಹಿಳಾ ಪ್ರಯಾಣಿಕರಿಗಾಗಿಯೇ ಕೆಲ ತಿಂಗಳ ಹಿಂದೆ ಸೋನಾಳ ರಸ್ತೆಯ ತಿರುವಿನಲ್ಲಿ ನಿರ್ಮಿಸಿರುವ ಮಹಿಳಾ ಶೌಚಾಲಯದ ಮುಂದೆಯೇ ಆಟೊಗಳು ನಿಲ್ಲುವುದರಿಂದ ಶೌಚಾಲಯಕ್ಕೆ ತೆರಳಲು ದಾರಿ ಇಲ್ಲದಂತಾಗಿದ್ದು, ವಿವಿಧೆಡೆಯಿಂದ ಬರುವ ಮಹಿಳೆಯರಿಗೆ ಶೌಚಾಲಯ ಇದ್ದು ಇಲ್ಲದಂತಾಗಿದೆ.

ದೂರದ ನಾಂದೇಡ್, ಲಾತೂರ್‌, ಉದಗೀರ್‌, ಹೈದರಾಬಾದ್‌, ಜಹೀರಾಬಾದ್‌, ಬೀದರ್‌, ಭಾಲ್ಕಿ, ಭಾತಂಬ್ರಾ, ಲಖಣಗಾಂವ ಸೇರಿ ಇತರೆ ಪ್ರದೇಶಗಳಿಂದ ನಿತ್ಯ ನೂರಾರು ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬರುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ಕೆಲ ತಿಂಗಳ ಹಿಂದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಶೌಚಾಲಯದ ಒಳಗೆ ಹೋಗಲು ದಾರಿಯೇ ಇರುವುದಿಲ್ಲ ಎಂದು ಮಹಿಳಾ ಪ್ರಯಾಣಿಕರು ದೂರಿದ್ದಾರೆ.

‘ಕಮಲನಗರದಲ್ಲಿ ಸುಮಾರು 40 ರಿಂದ 50 ಆಟೊಗಳಿವೆ. ಆಟೊಗಳಿಗೆ ಪ್ರತ್ಯೇಕ ನಿಲ್ದಾಣಗಳಿಲ್ಲ. ಎಲ್ಲಾ ಆಟೊಗಳನ್ನು ಮಹಿಳಾ ಶೌಚಾಲಯದ ಮುಂದೆಯೇ ತಂದು ಸಾಲಾಗಿ ನಿಲ್ಲಿಸಲಾಗುತ್ತಿದೆ. ಶೌಚಾಲಯಕ್ಕೆ ಹೋಗಲು ಸ್ವಲ್ಪ ಜಾಗವೂ ಇರುವುದಿಲ್ಲ. ಚಾಲಕರಿಗೆ ಮನವಿ ಮಾಡಿ ಆಟೊರಿಕ್ಷಾಗಳನ್ನು ಅಲ್ಲಿಂದ ತೆಗೆಸಿದ ನಂತರ ಮಹಿಳೆಯರು ಶೌಚ ಮಾಡಲು ತೆರಳಬೇಕು. ಶೌಚಾಲಯದ ಬಳಿಯೇ ಆಟೊ ಚಾಲಕರು ನಿಲ್ಲುವುದಿಂದ ಮಹಿಳೆಯರಿಗೆ ಮುಜಗರವಾಗುತ್ತಿದೆ’ ಎಂದು ಮಹಿಳಾ ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಅವರು ಹೇಳಿದರು.

ಮಹಿಳೆಯರು ಶೌಚಾಲಯಕ್ಕೆ ಹೋಗಲು ಆಗುತ್ತಿರುವ ಸಮಸ್ಯೆಗೆ ಬಗ್ಗೆ ಹಲವು ಬಾರಿ ಪಿಡಿಒಗೆ ತಿಳಿಸಿದ್ದೇನೆ. ಆದರೂ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ಶೌಚಾಲಯದ ಬಾಗಿಲ ಬಳಿಯೇ ಆಟೊಗಳನ್ನು ನಿಲ್ಲಿಸುವುದರಿಂದ ಮಹಿಳೆಯರು ಶೌಚಾಲಯಕ್ಕೆ ಬರುತ್ತಿಲ್ಲ.
ಲಕ್ಷ್ಮಿಬಾಯಿ ವೆಂಕಟ, ಶೌಚಾಲಯ ನಿರ್ವಹಣೆ ಮಾಡುವ ಮಹಿಳೆ, ಕಮಲನಗರ
ಶೌಚಾಲಯ ಮುಂಭಾಗ ಆಟೊ ನಿಲ್ಲಿಸದಂತೆ ಹಲವು ಸಲ ಆಟೊ ಚಾಲಕರಿಗೆ ಸೂಚನೆ ನೀಡಿದ್ದರೂ ಅವರು ಅಲ್ಲಿಯೇ ನಿಲ್ಲಿಸುತ್ತಿದ್ದಾರೆ. ಆಟೊ ನಿಲ್ದಾಣಕ್ಕೆ ಪ್ರತ್ಯೇಕ ಜಾಗ ಗುರುತಿಸಿಕೊಳ್ಳುವಂತೆ ಆಟೊ ಚಾಲಕರ ಸಂಘಕ್ಕೆ ತಿಳಿಸಲಾಗಿದೆ.
ರಾಜಕುಮಾರ ತಂಬಾಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಮಲನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.