ಬೀದರ್: ಸೀಟಿಗಾಗಿ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡಿರುವ ಘಟನೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನಡೆದಿದೆ.
ಕೆಎ 38, ಎಫ್ 1198 ಸಂಖ್ಯೆಯ ಬೀದರ್ ಡಿಪೋಗೆ ಸೇರಿದ ಬಸ್ಸಿನಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ.
ಬೀದರ್‌ನಿಂದ ಕಲಬುರಗಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಮಹಿಳೆಯರು ಸೀಟಿಗಾಗಿ ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ. ಆನಂತರ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಹೊಡೆದಾಡಿದ್ದಾರೆ. ಪರಸ್ಪರ ಬಟ್ಟೆ ಹಿಡಿದು ಎಳೆದಾಡಿಕೊಂಡು ನಿಂದಿಸಿದ್ದಾರೆ. ಸಹ ಪ್ರಯಾಣಿಕರು ಜಗಳ ಬಿಡಿಸಲು ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ. ಘಟನೆ ನಡೆದಾಗ ಬಸ್ಸಿನಲ್ಲಿ ಚಾಲಕ, ಕಂಡಕ್ಟರ್ ಇರಲಿಲ್ಲ.
‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಬಸ್‌ಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ.
‘ಬಸ್ಸಿನಲ್ಲಿ ಇಂತಹದ್ದೊಂದು ಘಟನೆ ಆಗಿದೆ ಎಂದು ಯಾರೋ ಒಬ್ಬರು ಹೇಳಿದ್ದಾರೆ. ಆದರೆ, ಅದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಬೀದರ್ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.