ಬೀದರ್: ‘ಪ್ರತಿ 55 ನಿಮಿಷಕ್ಕೊಬ್ಬ ವಿದ್ಯಾರ್ಥಿ ಮಾನಸಿಕ ಕಾಯಿಲೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ’ ಎಂದು ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯ ಡಾ. ರಾಘವೆಂದ್ರ ವಾಗೋಲೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಹಭಾಗಿತ್ವದಲ್ಲಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಜನತೆ ಅತಿಯಾಗಿ ಮೊಬೈಲ್ ಬಳಸಿ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅದರಿಂದ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆ ಪ್ರಕಾರ, 14 ರಿಂದ 19 ವರ್ಷದ ಮಕ್ಕಳು ಹೆಚ್ಚಾಗಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಉತ್ತಮ ಪೌಷ್ಟಿಕಾಂಶ ಆಹಾರ ಸೇವಿಸಬೇಕು. ವ್ಯಾಯಾಮ, ಧ್ಯಾನ ಬದುಕಿನ ಭಾಗವಾಗಿ ಮಾಡಿಕೊಳ್ಳಬೇಕು. ಇದರಿಂದ ಒತ್ತಡದಿಂದ ಹೊರಬರಬಹುದು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೋಡೆ ಮಾತನಾಡಿ, ಪ್ರತಿಯೊಬ್ಬ ಮಾನಸಿಕ ರೋಗಿಯನ್ನು ಸಮಾಜದಲ್ಲಿ ಗೌರವ ಭಾವದಿಂದ ಕಾಣಬೇಕು. ಮಾನಸಿಕ ರೋಗಿಗಳು ಕಂಡರೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಮಾಹಿತಿ ಕೊಡಬೇಕು. ಅವರಿಗೆ ಸೂಕ್ತ ಮಾನಸಿಕ ಚಿಕಿತ್ಸೆ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ‍್ಯಕ್ರಮ ಅಧಿಕಾರಿ ಡಾ. ಕಿರಣ ಎಮ್. ಪಾಟೀಲ ಮಾತನಾಡಿ, ಮಾನಸಿಕ ಆರೋಗ್ಯದ ಸಲಹೆಗೆ ಟೋಲ್ ಫ್ರೀ ನಂಬರ್ 14416 ಕರೆ ಮಾಡಿ ಆಪ್ತ ಸಮಾಲೋಚಕರು ಮತ್ತು ಮನೋವೈದ್ಯರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಬ್ರಿಮ್ಸ್‌ನ ಡಾ.ಅನಿಲಕುಮಾರ ಎಕಲಾರೆ, ಜಿಲ್ಲಾ ಮಾನಸಿಕ ವಿಭಾಗದ ಮನಃಶಾಸ್ತ್ರಜ್ಞ ಡಾ.ಮಲ್ಲಿಕಾರ್ಜುನ ಗುಡ್ಡೆ, ಜಿಲ್ಲಾ ಮಾನಸಿಕ ವಿಭಾಗದ ಆಪ್ತ ಸಮಾಲೋಚಕ ಸಿಮಪ್ಪ ಸರಕೂರೆ, ವಕೀಲ ಶಿವರಾಜ, ಆರೋಗ್ಯ ಇಲಾಖೆಯ ಸಿಬ್ಬಂದಿ ಪರಶುರಾಮ, ಜ್ಯೋತಿ, ರೇಣುಕಾ, ರಾಠೋಡ್ ಪ್ರಮೋದ್, ಅಂಬಾದಾಸ, ಕುಷ್ಠರೋಗ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ಹಾಜರಿದ್ದರು.
‘ಸಕಾರಾತ್ಮಕ ಯೋಚನೆಯಿಂದ ನೆಮ್ಮದಿ’
ಬೀದರ್ ನಗರದ ನಾವದಗೇರಿಯ ಇಮ್ಯಾನುವೆಲ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ಗುರುವಾರ ಡಾನ್ ಬಾಸ್ಕೊ ಮತ್ತು ‘ಬ್ರೇಡ್ಸ್’ ಸಂಸ್ಥೆ ಸಹಯೋಗದಲ್ಲಿ ವಿಶ್ವ ಮಾನಸಿಕ ಅರೋಗ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಡಾನ್ ಬಾಸ್ಕೊ ಸಂಸ್ಥೆಯ ನಿರ್ದೇಶಕ ಫಾದರ್ ಸ್ಟೀವೆನ್ ಲಾರೆನ್ಸ್ ಮಾತನಾಡಿ ಬರುವ ಎರಡು ವರ್ಷಗಳಲ್ಲಿ ಮೂರು ಸಾವಿರ ಮಕ್ಕಳು ಪೋಷಕರು ಶಿಕ್ಷಕರಿಗೆ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಸೋನಿಯಾ ಮೊಸಸ್ ಮಾತನಾಡಿ ಮನುಷ್ಯ ಸಕಾರಾತ್ಮಕವಾಗಿ ಯೋಚಿಸಿದರೆ ನೆಮ್ಮದಿಯಿಂದ ಇರಬಹುದು. ಕುಟುಂಬದಲ್ಲಿ ಪ್ರೀತಿ ವಿಶ್ವಾಸದಿಂದ ಜೀವಿಸಿದರೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು. ಶರ್ಲಿನ್ ರಾಜಶ್ರೀ ‘ಮೈಂಡ್’ ಪ್ರಾಜೆಕ್ಟ್ ಜಿಲ್ಲಾ ಸಂಯೋಜಕ ಅಕ್ಷಯ್ ಕುಮಾರ್ ಮೊಸಸ್ ನಾಗೂರೆ ಸಂಜುಕುಮಾರ್ ಪೋತೆ ಸುನಿಲ್ ಕುಮಾರ್ ಬಚ್ಚನ್ ಜೈಕುಮಾರ್ ಬುಡೆರಿ ಅನಿಲಕುಮಾರ್ ಬುಡೆರಿ ಮನೋಹರ್ ಕಲ್ಲಪ್ಪ ಸ್ವಾಮಿದಾಸ್ ದೊಡ್ಡೆ ನರಸಣ್ಣ ಸುರೇಶ ಯೋಹಾನ ಸಿದ್ದರಾಮ ಎಲ್ಸನ್ ಆನಂದ್ ಕಲ್ಲಪ್ಪ ಮಕ್ಕಳ ಆಪ್ತ ಸಮಾಲೋಚಕ ಸುಜಾತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.