ADVERTISEMENT

ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಶೌಚಾಲಯ ಇರಲಿ: ಶಾಸಕ ಡಾ. ಶೈಲೇಂದ್ರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:20 IST
Last Updated 19 ನವೆಂಬರ್ 2024, 15:20 IST
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಬೀದರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತೆಗಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ ಅವರು ಗೌರವಿಸಿ ಪ್ರಮಾಣ ಪತ್ರ ವಿತರಿಸಿದರು
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಬೀದರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತೆಗಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ ಅವರು ಗೌರವಿಸಿ ಪ್ರಮಾಣ ಪತ್ರ ವಿತರಿಸಿದರು   

ಬೀದರ್‌: ‘ಮನೆಯಲ್ಲಿ ದೇವರ ಕೋಣೆ ಇಲ್ಲದಿದ್ದರೂ ಶೌಚಾಲಯ ಇರಬೇಕಾದದ್ದು ಅತಿ ಮುಖ್ಯವಾಗಿದೆ’ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಸ್ವಚ್ಛ ಭಾರತ್‌ ಮಿಷನ್, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಶೌಚಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನ.19 ರಿಂದ ಡಿಸೆಂಬರ್ 10ರ ವರೆಗೆ ನಡೆಯಲಿರುವ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಆಂದೋಲನಕ್ಕೂ ಚಾಲನೆ ನೀಡಿದರು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯ ಅಥವಾ ಸ್ವಂತ ಹಣದಿಂದಾಗಲಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಹೇಳಿದರು.

ADVERTISEMENT

ಡಿಸೆಂಬರ್ 10ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ 185 ಗ್ರಾಮ ಪಂಚಾಯತಿಗಳಲ್ಲಿ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮ ಅತಿ ಹೆಚ್ಚು ಸ್ವಚ್ಛತೆಗೆ ಒತ್ತು ಕೊಡುತ್ತದೆಯೋ ಅಂಥ ಮೂರು ಗ್ರಾಮಗಳಿಗೆ ವೈಯಕ್ತಿಕ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದರು. 

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಯಲು ಮಲ ವಿಸರ್ಜನೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ಬಯಲು ಶೌಚ ಮುಕ್ತ ಮಾಡಲು ಶ್ರಮಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ  ಮಾತನಾಡಿ, ಬೀದರ್‌ ಜಿಲ್ಲೆಯಲ್ಲಿ ಸ್ವಚ್ಛ ಭಾರತ್‌ ಮಿಷನ್ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಲಾಗಿದೆ. 2.25 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೌಚಾಲಯ ಕಟ್ಟುವುದರ ಜೊತೆಗೆ ಬಳಕೆ ಮಾಡುವ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಕಸ ವಿಲೇಮಾರಿ ಮಾಡುವ ವಾಹನ ನೀಡಲಾಗಿದೆ. ಪ್ರತಿ ಮನೆಗೆ ಕೂಡ ಹಸಿ ಕಸ, ಒಣ ಕಸ ವಿಂಗಡಿಸಲು 2 ಬುಟ್ಟಿಗಳನ್ನು ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. 185 ಮಹಿಳಾ ಚಾಲಕಿಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಇದರಿಂದ ಮಹಿಳಾ ಸಶಕ್ತೀಕರಣಕ್ಕೆ ಉತ್ತೇಜನ ಸಿಕ್ಕಿದೆ.. 71 ಸ್ವಚ್ಛ ಸಂಕೀರ್ಣಗಳು ಪೂರ್ಣಗೊಂಡಿವೆ. 114 ಘಟಕ ಪ್ರಗತಿಯಲ್ಲಿದೆ. 597 ಡಿಪಿಆರ್‌ಗಳನ್ನು ಸಿದ್ಧಪಡಿಸಲಾಗಿದ್ದು ಅನುಮೋದನೆ ಪಡೆದು 47 ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ವಿವರಿಸಿದರು.

ಮಲತ್ಯಾಜ್ಯ ನಿರ್ವಹಣೆ ಕೂಡ ಎಫ್‌ಎಸ್‌ಎಂ ಘಟಕಗಳಿಂದ ಆಗಲಿದ್ದು, ಅವುಗಳನ್ನು ನಿರ್ಮಿಸುವ ಕಾಮಗಾರಿಗಳು ಚಾಲನೆಯಲ್ಲಿವೆ. ಸಮುದಾಯ ಶೌಚಾಲಯ ₹25 ಲಕ್ಷ  ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 20 ಕಾಮಗಾರಿಗಳು ಮುಗಿದಿದ್ದು ಬಾಕಿ ಕಾಮಗಾರಿಗಳು ಚಾಲ್ತಿಯಲ್ಲಿರುತ್ತವೆ. ವಿಶೇಷ ಆಂದೋಲನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಸೆ.14 ರಿಂದ ಅ.2 ರ ವರೆಗೆ ಏರ್ಪಡಿಸಿದ್ದ ಸ್ವಚ್ಛತಾ ಸೇವಾ ಆಂದೋಲನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹುಮನಾಬಾದ್‌ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ.ನಾಯಕ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್, ಗ್ರಾಮೀಣ ಕುಡಿಯುವ ನೀರು ಘಟಕದ ಕಾರ್ಯಪಾಲಕ ಎಂಜಿನಿಯರ್‌ ರಾಮಲಿಂಗಪ್ಪ ಬಿರಾದಾರ, ಜಿಲ್ಲಾ ಪಂಚಾಯಿತಿ ಪಿಡಿಒ ಜಗನ್ನಾಥ ಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು, ಸ್ವಚ್ಛ ಭಾರತ ಮಿಷನ್ ವಿಶೇಷ ನೋಡಲ್ ಅಧಿಕಾರಿ ಗೌತಮ ಅರಳಿ, ಐಇಸಿ ಸಮಾಲೋಚಕ ಪಂಡಿತ ವಾಡೇಕರ, ಎಸ್‌ಎಚ್‌ ಸ್ವಚ್ಛತಾ ಮಹಿಳೆಯರು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.