ಖಟಕಚಿಂಚೋಳಿ: ‘ಗ್ರಾಮದಿಂದ ಹಳ್ಳಿಖೇಡ (ಬಿ)ಪಟ್ಟಣ, ಚಳಕಾಪುರ ಸೇರಿದಂತೆ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಅಳವಡಿಸಲಾದ ನಾಮಫಲಕದಲ್ಲಿ ಊರುಗಳ ಹೆಸರುಗಳನ್ನು ತಪ್ಪಾಗಿ ಬರೆದು ಕನ್ನಡಕ್ಕೆ ಅವಮಾನ ಮಾಡಲಾಗಿದೆ’ ಎಂದು ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕೆನಾಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಎಲ್ಲ ಅಂಗಡಿ, ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮಫಲಕ ಅಳವಡಿಸಬೇಕು ಎಂದು ಪ್ರತಿಭಟನೆ ನಡೆಯುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಾಮಫಲಕಗಳಲ್ಲಿ ಊರುಗಳ ಹೆಸರನ್ನು ತಪ್ಪಾಗಿ ಬರೆದು ಕನ್ನಡ ಭಾಷೆಗೆ ಅವಮಾನಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬಹುತೇಕ ಊರುಗಳ ಹೆಸರಿನಲ್ಲಿ ಒಂದಿಲ್ಲೊಂದು ತಪ್ಪಾಗಿದೆ. ಪ್ರಯಾಣಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ತಪ್ಪಾಗಿ ಬರೆದು ಶಾಸ್ತ್ರೀಯ ಭಾಷೆ ಕನ್ನಡವನ್ನು ಅವಮಾನಿಸಲಾಗಿದೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡ ರೇವಣಸಿದ್ಧ ಜಾಡರ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಗ್ರಾಮಗಳ ಹೆಸರು ತಿಳಿಯದೇ ಹಲವು ಕಿಲೋಮೀಟರ್ ಮುಂದೆ ಹೋಗಿರುತ್ತೇವೆ. ನಾಮಫಲಕಗಳಿದ್ದರೂ ದಾರಿಹೋಕರನ್ನು ಕೇಳಬೇಕಾದ ಅನಿವಾರ್ಯತೆ ಬಂದಿದೆ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.
‘ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಅಳವಡಿಸಿರುವ ನಾಮಫಲಕವನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು’ ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.