ADVERTISEMENT

ಜಾನಪದದಿಂದ ಯುವ ಪೀಳಿಗೆ ದೂರ: ಜಗನ್ನಾಥ ‌ಹೆಬ್ಬಾಳೆ ಕಳವಳ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:37 IST
Last Updated 30 ಜುಲೈ 2024, 14:37 IST
ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ನಡೆದ ಶಾಲಾ ಕಾಲೇಜಿಗೊಂದು ಜಾನಪದ‌ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಗನ್ನಾಥ ‌ಹೆಬ್ಬಾಳೆ, ಶಂಭುಲಿಂಗ ಕಾಮಣ್ಣ ಇದ್ದರು
ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ನಡೆದ ಶಾಲಾ ಕಾಲೇಜಿಗೊಂದು ಜಾನಪದ‌ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಗನ್ನಾಥ ‌ಹೆಬ್ಬಾಳೆ, ಶಂಭುಲಿಂಗ ಕಾಮಣ್ಣ ಇದ್ದರು   

ಬಸವಕಲ್ಯಾಣ: 'ಯುವ ಪೀಳಿಗೆ ಜಾನಪದ ಕಲೆ,‌ ಸಾಹಿತ್ಯದಿಂದ ಬಹುದೂರವಿದೆ. ಅವರಲ್ಲಿ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು' ಎಂದು ಜಾನಪದ ತಜ್ಞ ಜಗನ್ನಾಥ ಹೆಬ್ಬಾಳೆ ಹೇಳಿದರು.

ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ಜಾನಪದ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಶಾಲಾ ಕಾಲೇಜಿಗೊಂದು ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಳೆಯ ತಲೆಮಾರಿನವರಿಗೆ ಜಾನಪದವೇ ಜೀವಾಳ ಆಗಿತ್ತು. ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ‌ಕೋಲಾಟ, ಭಜನೆ, ಭುಲಾಯಿ ಪದ ಹಾಡುಗಾರಿಕೆಯ ಕಾರ್ಯಕ್ರಮಗಳು ಇರುತ್ತಿದ್ದವು. ಅವರಿಗೆ‌ ಇದೇ ಮನೋರಂಜನೆ ಒದಗಿಸುತ್ತಿತ್ತು. ಜೊತೆಯಲ್ಲಿ ಸದ್ಭಾವನೆಯ ಸಂದೇಶವನ್ನೂ ಈ ಮೂಲಕ ಸಾರಲಾಗುತ್ತಿತ್ತು’ ಎಂದರು.

ADVERTISEMENT

‘ಆದರೆ ಟಿ.ವಿ ಮತ್ತು ಮೊಬೈಲ್ ಬಂದ ನಂತರ ಹಳೆಯ ಕಲೆ, ಸಂಸ್ಕೃತಿ ಮಾಯ ಆಗುತ್ತಿದೆ. ಕತೆ ಹೇಳುವ, ವಿವಿಧ ಕಲೆಗಳ ಪ್ರದರ್ಶನ ನಿಂತು ಹೋಗಿದೆ. ನಗರದ ಸಂಪ್ರದಾಯ ಎಲ್ಲೆಡೆ ಪಸರಿಸುತ್ತಿದೆ’ ಎಂದರು.

ಶರಣ ಸಾಹಿತ್ಯ ‌ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ‘ಜಾನಪದ ಸಾಹಿತ್ಯ ಮತ್ತು ಕಲೆ ಎಲ್ಲರನ್ನೂ ಒಟ್ಟಾಗಿಸುತ್ತದೆ. ಊರು ಮತ್ತು ಕುಟುಂಬದವರು ಒಗ್ಗಟ್ಟಿನಿಂದ ಇರುವಂತೆ ಮಾಡುತ್ತದೆ’ ಎಂದರು.

ಪ್ರಾಚಾರ್ಯ ಭೀಮಾಶಂಕರ ಬಿರಾದಾರ, ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಬಸವರಾಜಸ್ವಾಮಿ ತ್ರಿಪುರಾಂತ, ಬಸವರಾಜ ಖಂಡಾಳೆ ಮಾತನಾಡಿದರು.

ಪ್ರಾಧ್ಯಾಪಕ ಅಶೋಕ ಕೋರೆ, ಕಾಲೇಜಿನ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಲಕಶೆಟ್ಟಿ, ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಗಂಗಾಧರ ಸಾಲಿಮಠ, ಚನ್ನಬಸಪ್ಪ ಶೆಟ್ಟೆಪ್ಪ, ನಂದಿನಿ ಮತ್ತಿತರರು ‌ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.