ADVERTISEMENT

ಬೀದರ್‌: ‘ಯುವನಿಧಿ’ ಯೋಜನೆ ನೋಂದಣಿಗೆ ಯುವಜನರ ನಿರುತ್ಸಾಹ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಫೆಬ್ರುವರಿ 2024, 5:12 IST
Last Updated 28 ಫೆಬ್ರುವರಿ 2024, 5:12 IST
ಬೀದರ್‌ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ
ಬೀದರ್‌ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ   

ಬೀದರ್‌: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಯುವನಿಧಿ’ ಯೋಜನೆಗೆ ಜಿಲ್ಲೆಯಲ್ಲಿ ಯುವಕರಿಂದ ನಿರುತ್ಸಾಹ ವ್ಯಕ್ತವಾಗಿದೆ. ಯೋಜನೆಯಡಿ ನಿಧಾನ ಗತಿಯಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಪ್ರತಿವರ್ಷ ಸರಿಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಾರೆ. ಆದರೆ, ಯೋಜನೆಗೆ ಸಾಕಷ್ಟು ಪ್ರಚಾರ ಕೊಡಲಾಗಿದೆ. 2023ನೇ ಡಿಸೆಂಬರ್‌ 26ರಿಂದ ನೋಂದಣಿ ಶುರುವಾಗಿದೆ. ಎರಡು ತಿಂಗಳು ಕಳೆಯುತ್ತ ಬಂದಿದ್ದು, ಮಂಗಳವಾರದ ವರೆಗೆ (ಫೆ.27) ಜಿಲ್ಲೆಯಲ್ಲಿ 5,361 ಯುವಕ/ಯುವತಿಯರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ 1,307 ಜನರ ಖಾತೆಗಳಿಗೆ ಹಣ ಜಮೆ ಆಗಿದೆ. ಏಕೆಂದರೆ ಜನವರಿ 25ರ ತನಕ ಅಷ್ಟೇ ಜನ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಅದಾದ ಬಳಿಕ ಹೆಸರು ನೋಂದಣಿ ಮಾಡಿಸಿದವರ ದಾಖಲೆ, ವಿವರಗಳನ್ನೆಲ್ಲ ಪರಿಶೀಲನೆಗೆ ಒಳಪಟ್ಟ ನಂತರ ಮಾರ್ಚ್‌ನಲ್ಲಿ ಹಣ ಜಮೆ ಆಗಲಿದೆ.

ADVERTISEMENT

ಯೋಜನೆ ಲಾಭ ಎಲ್ಲಿತನಕ?: ಯೋಜನೆಯಡಿ ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಎರಡು ವರ್ಷದ ವರೆಗೆ ಅವರ ಖಾತೆಗಳಿಗೆ ಹಣ ಜಮೆ ಆಗಲಿದೆ. ಈಗಾಗಲೇ ಸರ್ಕಾರ ನಿರ್ಧರಿಸಿದಂತೆ ಪದವಿ, ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು ತಲಾ ₹3 ಸಾವಿರ, ಡಿಪ್ಲೊಮಾ ಮುಗಿಸಿದವರಿಗೆ ₹1,500 ನೀಡಲಾಗುತ್ತದೆ.

ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು 25ನೇ ತಾರೀಖಿನ ಒಳಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ದೃಢೀಕರಣ ಮಾಡಬೇಕು. ಎರಡು ವರ್ಷಗಳ ಅವಧಿಯ ಮಧ್ಯದಲ್ಲಿ ನೌಕರಿ ಸಿಕ್ಕರೆ, ಸಬ್ಸಿಡಿ ಮೇಲೆ ಸಾಲ ಪಡೆದು ಸ್ವಯಂ ಉದ್ಯೋಗ ಆರಂಭಿಸಿದರೆ ಅಥವಾ ವ್ಯಾಸಂಗ ಮುಂದುವರೆಸಿದರೆ ಅದನ್ನು ಸ್ವಯಂ ದೃಢೀಕರಿಸಬೇಕು. ಈ ಮೂರರಲ್ಲಿ ಯಾವುದಾದರೂ ಒಂದು ಮಾಡಿದರೂ ಅವರು ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ಕೊಡಬೇಕು. ಸ್ವಲ್ಪ ಏರುಪೇರಾದರೂ ಯೋಜನೆಯ ವ್ಯಾಪ್ತಿಗೆ ಸೇರುವುದಿಲ್ಲ.

ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳಲ್ಲಿ 1,307 ಜನರ ಖಾತೆಗಳಿಗೆ ಹಣ ಜಮೆ ಆಗಿದೆ. ಇದರಲ್ಲಿ ಶೇ 99.99ರಷ್ಟು ಪದವಿ, ಸ್ನಾತಕೋತ್ತರ ಪದವೀಧರರೇ ಇದ್ದಾರೆ. ಡಿಪ್ಲೊಮಾ ಪೂರೈಸಿದವರ ಸಂಖ್ಯೆ ಬೆರಳೆಣಿಕೆಯಷ್ಟು ಎಂದು ಗೊತ್ತಾಗಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಕಾರ, ಮೂರು ವರ್ಷ ಹಾಗೂ ಐದು ವರ್ಷದ ಡಿಪ್ಲೊಮಾ ಕೋರ್ಸ್‌ಗಳು ಇರುವುದರಿಂದ ನೋಂದಣಿ ಕಡಿಮೆಯಾಗಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

‘ಯುವನಿಧಿ’ಗೆ ಹೆಸರು ನೋಂದಣಿ

ಮಾಡಿಸಿದವರ ತಾಲ್ಲೂಕುವಾರು ವಿವರ ತಾಲ್ಲೂಕು; ನೋಂದಣಿ ಮಾಡಿದವರು ಔರಾದ್‌;475 ಬಸವಕಲ್ಯಾಣ;1005 ಭಾಲ್ಕಿ;934 ಬೀದರ್‌;1575 ಚಿಟಗುಪ್ಪ;360 ಹುಮನಾಬಾದ್‌;808 ಹುಲಸೂರ;63 ಕಮಲನಗರ;141 ಒಟ್ಟು;5361 (ಮೂಲ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೀದರ್‌)

‘ಹಳೆ ವಿದ್ಯಾರ್ಥಿ ಸಂಘಗಳ ಸಂಪರ್ಕ’

‘ಯುವನಿಧಿ ಯೋಜನೆಯ ಪ್ರಯೋಜನ ಹೆಚ್ಚಿನ ಯುವಕ/ಯುವತಿಯರಿಗೆ ಸಿಗಬೇಕು. ಅದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾಲೇಜು ಪ್ರಾಂಶುಪಾಲರ ಸಭೆ ನಡೆಸಲಾಗಿದೆ. ಹಳೆ ವಿದ್ಯಾರ್ಥಿ ಸಂಘಗಳನ್ನು ಸಂಪರ್ಕಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಅವರ ವಾಟ್ಸ್‌ಆ್ಯಪ್‌ ಗ್ರುಪ್‌ಗಳಲ್ಲಿ ಸಂದೇಶ ಕಳಿಸಲಾಗುತ್ತಿದೆ’ ಎಂದು ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕಚೇರಿಯ ಅಧಿಕಾರಿ ಬಸವರಾಜ ತನಿಖೆದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರತಿ ದಿನ ವೆಬ್‌ಸೈಟಿನಲ್ಲಿ ನೋಂದಣಿ ಆಗುತ್ತದೆ. ತಾಂತ್ರಿಕ ಕಾರಣಗಳು ದಾಖಲೆಗಳು ಸರಿಯಿಲ್ಲದೇ ಇದ್ದರೆ ಅರ್ಜಿ ಸ್ವೀಕರಿಸುವುದಿಲ್ಲ. ಐದು ವರ್ಷ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್‌ ಇರುವುದರಿಂದ ಅವರ ನೋಂದಣಿ ಹೆಚ್ಚಾಗಿಲ್ಲ. ಇಲಾಖೆಯ ಕಡೆಯಿಂದ ಕಾಲೇಜುಗಳಿಗೆ ತೆರಳಿ ಮಾಹಿತಿ ಕೂಡ ನೀಡಲಾಗುತ್ತಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ ಬಸವರಾಜ ಅವರ ಮೊಬೈಲ್‌ ಸಂಖ್ಯೆ: 8660670372 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.