ADVERTISEMENT

ಮುಸ್ಲಿಮರ ಮತಗಳಿಂದ ಸಾಗರ್‌ ಖಂಡ್ರೆ ಗೆಲುವು: ಹೇಳಿಕೆ ಸಮರ್ಥಿಸಿದ ಸಚಿವ ಜಮೀರ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 10:24 IST
Last Updated 25 ಜೂನ್ 2024, 10:24 IST
ಜಮೀರ್‌ ಅಹಮ್ಮದ್‌ ಖಾನ್‌
ಜಮೀರ್‌ ಅಹಮ್ಮದ್‌ ಖಾನ್‌   

ಬೀದರ್‌: ‘ಮುಸ್ಲಿಮರ ಮತಗಳಿಂದ ಬೀದರ್‌ ಲೋಕಸಭಾ ಚುನಾವಣೆಯಲ್ಲಿ ಸಾಗರ್‌ ಖಂಡ್ರೆಯವರು ಗೆದ್ದಿದ್ದಾರೆ ಎಂದು ಹೇಳಿರುವುದರಲ್ಲಿ ತಪ್ಪೇನಿದೆ? ಚುನಾವಣೆಯಲ್ಲಿ ಮುಸ್ಲಿಮರು ‘ಒನ್‌ ಸೈಡ್‌’ ಮತ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ಆ ಸಮಾಜ ಅದನ್ನು ಹೇಳಬೇಕಲ್ಲವೇ’ ಎಂದು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್‌. ಜಮೀರ್‌ ಅಹಮ್ಮದ್‌ ಖಾನ್‌ ಅವರು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸಾಗರ್‌ ಖಂಡ್ರೆಯವರು ಚುನಾವಣೆಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಅದರಲ್ಲಿ ಎರಡು ಲಕ್ಷ ಮುಸ್ಲಿಮರ ಮತಗಳಿವೆ. ಎರಡು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವಿದೆಯೇ? ಮುಸ್ಲಿಮರು ಒನ್‌ ಸೈಡ್‌ ಮತ ಹಾಕಿದ್ದಾರೆ. ಮುಸ್ಲಿಮರ ಮತಗಳು ಹಂಚಿ ಹೋಗಿಲ್ಲ. ಹೀಗಾಗಿ ಸಾಗರ್‌ ಖಂಡ್ರೆ ಗೆದ್ದಿದ್ದಾರೆ ಎಂದು ಆ ಹಿನ್ನೆಲೆಯಲ್ಲಿ ಹೇಳಿದ್ದೆ ಎಂದು ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು.

ಮುಸ್ಲಿಮರು ಒನ್‌ ಸೈಡ್‌ ಮತ ಹಾಕಿದಕ್ಕೆ ಸಾಗರ್‌ ಖಂಡ್ರೆ ಗೆದ್ದಿದ್ದಾರೆ. ಅವರಿಂದ ನಾವು ಏನು ಬೇಕಾದರೂ ಕೆಲಸ ತೆಗೆದುಕೊಳ್ಳಬಹುದು. ಬೀದರ್‌ ಲೋಕಸಭೆ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಸಲ ಕಾಂಗ್ರೆಸ್‌ ಗೆದ್ದಿದೆ. ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ ನಮಗೆ ಖುಷಿ ಇದೆ. ನಮ್ಮ ಕೆಲಸಗಳು ಆಗುತ್ತವೆ ಎಂದು ಹೇಳಿದ್ದೆ. ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.