ADVERTISEMENT

ಕಾನೂನುಬಾಹಿರ ನಿವೇಶನ ಖಾತೆ; ಎಚ್ಚರಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 4:34 IST
Last Updated 24 ಫೆಬ್ರುವರಿ 2024, 4:34 IST
ಡಾ. ಗಿರೀಶ ಬದೋಲೆ
ಡಾ. ಗಿರೀಶ ಬದೋಲೆ   

ಬೀದರ್‌: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನಗಳ ಡಿಜಿಟಲ್ ಖಾತೆಗಳನ್ನು ಮಾಡಿಸಿಕೊಳ್ಳುವ ಮೊದಲು ಎಲ್ಲಾ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಪಂಚಾಯಿತಿಯಿಂದಲೇ ಖಾತೆಗಳನ್ನು ಮಾಡಿಸಿಕೊಳ್ಳಬೇಕು. ಕಾನೂನು ಬಾಹಿರ, ಅನಧಿಕೃತ ಖಾತೆಗಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ತಿಳಿಸಿದ್ದಾರೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ನಿರ್ಮಾಣಕ್ಕಾಗಿ, ಕೃಷಿ ಭೂಮಿಯನ್ನು ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆ ಆಗದೇ ಇರುವ ಹಾಗೂ ಸಕ್ಷಮ ಪ್ರಾಧಿಕಾರದಿಂದ (ವಿನ್ಯಾಸ ಬಡಾವಣೆ) ಲೇಔಟ್ ಅನುಮೋದನೆ ಪಡೆಯದೆ, ಕೃಷಿ ಭೂಮಿಯಲ್ಲಿ, ಇನಾಮ, ಸರ್ಕಾರಿ, ಅರಣ್ಯ ಇಲಾಖೆ ಜಮೀನಿನಲ್ಲಿ ನಿವೇಶನಗಳಿಗೆ ಅನಧಿಕೃತವಾಗಿ 11-ಬಿ, 9, 11-ಎ ಡಿಜಿಟಲ್ ಖಾತೆಗಳನ್ನು ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ಜಿಲ್ಲಾ ಪಂಚಾಯಿತಿಗೆ ದೂರುಗಳನ್ನು ಸಲ್ಲಿಸಿದ್ದರು. ಸದರಿ ದೂರುಗಳನ್ನು ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ. ಈ ಕ್ರಮ ಯಾವುದೇ ಒಬ್ಬ ಅಧಿಕಾರಿ ವಿರುದ್ಧವಲ್ಲ. ಸಾರ್ವಜನಿಕರ ಹಿತಕ್ಕಾಗಿ ಕೈಗೊಳ್ಳಲಾಗಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಫೆ. 21ರಂದು ಪಿಡಿಒಗಳ ಸಭೆ ಕರೆದು ಅನಧಿಕೃತವಾಗಿ ಡಿಜಿಟಲ್ ಖಾತೆಗಳನ್ನು ಮಾಡದಂತೆ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುವ ಯಾವುದೇ ಕೆಲಸಗಳನ್ನು ಮಾಡದಂತೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.