ಮಂಗಳೂರು: ‘ಮುಸ್ಲಿಮರನ್ನು ದ್ವೇಷಿಸುವುದರಲ್ಲೇ ಬಿಜೆಪಿಯ ಅಸ್ತಿತ್ವ ಇದೆ. ಅದನ್ನು ಹೊರತಾದ ಅಸ್ತಿತ್ವವೇ ಬಿಜೆಪಿಗೆ ಇಲ್ಲ. ಅದನ್ನೇ ತ್ಯಜಿಸಿದರೆ ಬಿಜೆಪಿ ಅಂಗಡಿಯನ್ನು ಮುಚ್ಚಬೇಕಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದರು.
ಮುಸ್ಲಿಮರ ಕುರಿತು ದ್ವೇಷಪೂರಿತವಾಗಿ ಮಾತನಾಡದಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆ ಕುರಿತು ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದರು. ‘ಗುಜರಾತ್ ನರಮೇಧದ ನೈಜ ವೃತ್ತಾಂತವನ್ನು ಬಿಬಿಸಿ ಚಾನೆಲ್ ಜಗಜ್ಜಾಹಿರು ಮಾಡಿದೆ’ ಎಂದರು.
‘ಜನರಿಗೆ ತಿಂಗಳಿಗೆ 200 ಯೂನಿಟ್ ವಿದ್ಯುತನ್ನು ಉಚಿತವಾಗಿ ನೀಡುವ ಹಾಗೂ ಮಹಿಳೆಯರಿಗೆ ₹ 2 ಸಾವಿರ ನೀಡುವ ಕಾರ್ಯಕ್ರಮಗಳ ಕುರಿತು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಜನರಿಗೆ ಅಪನಂಬಿಕೆ ಬೇಡ. ಪಕ್ಷವು ಈ ಎಲ್ಲ ಭರವಸೆಗಳನ್ನು ಈಡೇರಿಸಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಜಿಲ್ಲೆಯಲ್ಲಿ ಮೊದಲಿದ್ದ ವಾತಾವರಣ ಈಗ ಇಲ್ಲ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಮಗನವಾಡಿ ಕಾರ್ಯಕರ್ತೆಯರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ. ರಾತ್ರೋ ರಾತ್ರಿ ಅವರ ಮೇಲೆ ಲಾಠಿಚಾರ್ಜ್ ನಡೆಸಿದ್ದು ಖಂಡನೀಯ’ ಎಂದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ಏರ್ಪಡಿಸಿರುವ ಪ್ರಜಾಧ್ವನಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಇಬ್ರಾಹಿಂ ಕೊಡಿಜಾಲ್, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೊ, ಲುಕ್ಮಾನ್ ಬಂಟ್ವಾಳ್, ಆರ್.ಕೆ.ಪೃಥ್ವಿರಾಜ್, ಪಾಲಿಕೆ ವಿರೋಧ ಪಕ್ಷ ನಾಯಕ ನವೀನ್ ಡಿಸೋಜ, ಕೆ.ಹರಿನಾಥ್, ಭಾಸ್ಕರ್ ಕೆ., ಶಾಹುಲ್ ಹಮೀದ್, ಉಮೇಶ್ ದoಡೇಕೇರಿ, ಗಣೇಶ್ ಪೂಜಾರಿ, ಕುಮಾರಿ ಅಪ್ಪಿ, ದಿನೇಶ್ ರೈ, ಸಮದ್ ಅಡ್ಯಾರ್ ಇದ್ದರು.
‘ಕಟೀಲ್ ಬೇಡ, ನಳಿನ್ ಎನ್ನಿ ಸಾಕು’
‘ನಳಿನ್ ಕುಮಾರ್ ಕಟೀಲ್ ಅವರು ಮೋರಿ– ರಸ್ತೆಯಂತಹ ಅಭಿವೃದ್ಧಿ ವಿಚಾರದ ಬದಲು ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡುವಂತೆ ಬಹಿರಂಗವಾಗಿ ಕರೆ ನೀಡಿದ್ದಾರೆ. ಅವರ ಹೆಸರಿನ ಜೊತೆ ಕಟೀಲ್ ಸೇರಿಕೊಮಡಿದೆ. ಅವರಿಂದಾಗಿ ಈ ಕಟೀಲ್ ಹೆಸರಿಗೂ ಕಳಂಕ ಅಂಟಿಕೊಳ್ಳುತ್ತಿದೆ. ಜನರು ಅವರನ್ನು ನಳಿನ್ ಕುಮಾರ್ ಎಂದು ಮಾತ್ರ ಕರೆಯಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ರಮಾನಾಥ ರೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.