ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ‘ಕಾಂಗ್ರೆಸ್‌ಗೆ ಜೈ’ ಘೋಷಣೆಗಳು ಮುಗಿಲು ಮುಟ್ಟಿದವು. ಪರಸ್ಪರ ಸಿಹಿ ತಿನಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮತ ಎಣಿಕೆ ಕೇಂದ್ರದ ಎದುರು ಬೆಳಿಗ್ಗೆಯೇ ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸಿದರು. ಪ್ರತಿ ಸುತ್ತಿನ ಮತ ಎಣಿಕೆ ಮುಗಿದು ಪಕ್ಷದ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿರುವುದು ಗೊತ್ತಾದ ನಂತರ ಜೋರಾಗಿ ಕೂಗಿ, ನೃತ್ಯ ಮಾಡಿದರು. ಅಂತಿನ ನಾಲ್ಕೈದು ಸುತ್ತುಗಳು ಇರುವಾಗ, ಅಂತಿಮ ಫಲಿತಾಂಶ ಘೋಷಣೆ ಆಗುವ ಮೊದಲೇ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದರು.
ಕಾಂಗ್ರೆಸ್ ಬಾವುಟ ಹಿಡಿದು ಘೋಷಣೆಗಳನ್ನು ಕೂಗಿದರು. ಹೆಗಲ ಮೇಲೆ ಕಾರ್ಯಕರ್ತರನ್ನು ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು. ಶಿವಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದರು. ಆದ್ದರಿಂದ ಜನರು ಅವರ ಪತ್ನಿಯನ್ನು ಬೆಂಬಲಿಸಿದ್ದಾರೆ. ಇನ್ನಷ್ಟು ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಕಾರ್ಯಕರ್ತರು ಹೇಳಿದರು.
ನಾವು ನಿರೀಕ್ಷಿಸಿದಷ್ಟು ಲೀಡ್ ಬಂದಿಲ್ಲ. ಆದರೆ ಜಯ ಗಳಿಸಿರುವುದು ಸಮಾಧಾನ ತಂದಿದೆ. ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇವೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.