ಚಾಮರಾಜನಗರ: ನಗರದಿಂದ ತಿ.ನರಸೀಪುರವನ್ನು ಸಂಪರ್ಕಿಸುವ ರಸ್ತೆ ಅಕ್ಷರಶಃ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈಗಾಗಲೇ ಇಲ್ಲೊಂದು ಅಪಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೂ ಲೋಕೋಪಯೋಗಿ ಇಲಾಖೆ ಸುಮ್ಮನೇ ಕುಳಿತಿದೆ.
ರಾಜ್ಯ ಹೆದ್ದಾರಿ 209ರಲ್ಲಿ ಸಂತೇಮರಹಳ್ಳಿ ಬಿಟ್ಟ ನಂತರ ಮೂಗೂರು ತಲುಪುವವರೆಗೂ ರಸ್ತೆ ಸಂಪೂರ್ಣ ಹಾಳಾಗಿದೆ. ಭಾರಿ ಗಾತ್ರದ ಹೊಂಡಗಳು ಸೃಷ್ಟಿಯಾಗಿ ಸಂಚಾರ ದುಸ್ತರ ಎನಿಸಿವೆ.
ಮುಖ್ಯವಾಗಿ ಬಾನಳ್ಳಿ ಸಮೀಪ, ಕಾವುದವಾಡಿಯ ನಂತರ ಸಮಸ್ಯೆ ಹೆಚ್ಚಾಗಿದೆ. ರಸ್ತೆ ಮಧ್ಯದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇವೆ. ದೂರದಿಂದ ಗೋಚರವಾಗದ ಈ ಗುಂಡಿಗಳು ಹತ್ತಿರಕ್ಕ ಬಂದ ಮೇಲೆಯೇ ಕಾಣಿಸುತ್ತವೆ. ಗಂಟೆಗೆ 80 ಕಿ.ಮೀ ವೇಗದಲ್ಲಿದ್ದರಂತೂ ಮುಗಿದೇ ಹೋಯಿತು. ಚಕ್ರಗಳು ದಢಾರನೇ ಹಳ್ಳಕ್ಕೆ ಬೀಳುತ್ತವೆ. ಇದರಿಂದ ವಾಹನದಲ್ಲಿ ಕುಳಿತಿರುವ ವೃದ್ಧರು, ರೋಗಿಗಳು ಹೈರಣಾಗುತ್ತಾರೆ.
ಒಂದು ವೇಳೆ ಸಮೀಪಕ್ಕೆ ಬಂದಾಗ ಗುಂಡಿ ನೋಡಿ ವಾಹನದ ವೇಗವನ್ನು ಕಡಿಮೆ ಮಾಡಿದರೆ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುವುದು ನಿಶ್ಚಿತ ಎನಿಸಿದೆ. ಅತಿ ವೇಗದಲ್ಲಿ ಬರುವ ವಾಹನಗಳ ನಿಯಂತ್ರಣ ತಪ್ಪುತ್ತದೆ. ಇದರಿಂದ ಅಫಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಲೇ ಈ ಬಗೆಯ ಚಿಕ್ಕಪುಟ್ಟ ಅವಘಡಗಳು ಇಲ್ಲಿ ಸಂಭವಿಸಿವೆ.
ಮಂಗಲ ಹಾಗೂ ಮಾದಾಪುರ ಸಮೀಪ ಹೆದ್ದಾರಿಯನ್ನು ವಿಸ್ತರಿಸುವ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಇದೂ ಸಂಚಾರಕ್ಕೆ ಭಾರಿ ತೊಡಕಾಗಿ ಪರಿಣಮಿಸಿದೆ. ಆಮೆಗತಿಯ ಈ ಕಾಮಗಾರಿ ತೆವಳಿಕೊಂಡು ಬಾಗಳಿ ಮುಟ್ಟುವವರೆಗೂ ಈ ಗುಂಡಿಗಳಿಗೆ ಮುಕ್ತಿ ಇಲ್ಲ ಎಂಬ ಭಾವನೆ ಪ್ರಯಾಣಿಕರಲ್ಲಿ ಇದೆ. ಅದಕ್ಕೂ ಮುಂಚಿತವಾಗಿ ಕನಿಷ್ಠ ಇಲ್ಲೊಂದು ತೇಪೆ ಹಚ್ಚುವ ಕಾರ್ಯದ ಅಗತ್ಯ ಇದೆ.
ರಸ್ತೆಯೇ ಬಿರಿದು ಹೋಗಿದ್ದು, ಭಾರಿ ವಾಹನಗಳಿಗಂತೂ ತೊಡಕಾಗಿ ಪರಿಣಮಿಸಿದೆ. ಭಾರಿ ವಾಹನಗಳ ಹಿಂದೆ ಬರುವ ದ್ವಿಚಕ್ರ ವಾಹನ ಹಾಗೂ ಕಾರುಗಳ ಚಾಲಕರು ದಿಢೀರನೇ ವೇಗ ಕಡಿಮೆ ಮಾಡಿಕೊಳ್ಳುವ ಭಾರಿ ವಾಹನಗಳಿಂದ ಗಲಿಬಿಲಿಗೊಳ್ಳುವುದು ಸಾಮಾನ್ಯ ಎನಿಸಿದೆ.
ಯಾರಿಗೆ ಸೇರುತ್ತೆ ರಸ್ತೆ?
ಈ ರಸ್ತೆ ಯಾರಿಗೆ ಸೇರುತ್ತೇ ಎಂಬುದೇ ಯಾರಿಗೂ ಗೊತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರನ್ನು ಕೇಳಿದರೆ ಇದು ನಮಗೆ ಬರುವುದಿಲ್ಲ. ಬಹುಶಃ ರಾಜ್ಯ ಹೆದ್ದಾರಿಗೆ ಒಳಪಡಬಹುದು ಎನ್ನುತ್ತಾರೆ. ರಾಜ್ಯ ಹೆದ್ದಾರಿಗೆ ಸಂಬಂಧಪಟ್ಟವರನ್ನು ಕೇಳಿದರೆ ಅವರು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ. ಈ ರಸ್ತೆ ಕುರಿತು ಯಾರಿಗೆ ದೂರು ಕೊಡುವುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸಮೀಪದ ಗ್ರಾಮದ ನಿವಾಸಿ ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ರೋಗಿಗಳು ಹೈರಾಣು!
ಈ ರಸ್ತೆಯಲ್ಲಿ ಸಂಚರಿಸುವ ಅಂಬುಲೆನ್ಸ್‌ನಲ್ಲಿನ ರೋಗಿಗಳ ಪರಿಸ್ಥಿತಿ ಹೇಳತೀರದಾಗಿದೆ. ವೇಗ ಕಡಿಮೆ ಮಾಡಿ ನಿಧಾನವಾಗಿ ಸಂಚರಿಸಬೇಕಾದ ಅನಿವಾರ್ಯ ಚಾಲಕರಿಗೆ ಇದೆ. ಆದರೆ, ಇದರಿಂದ ಅಪಾಯದಲ್ಲಿರುವ ರೋಗಿಗಳ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ವೇಗವಾಗಿ ವಾಹನ ಚಾಲನೆ ಮಾಡಿದರೂ ಗುಂಡಿಗಳಿಂದಾಗಿ ರೋಗಿಗಳ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತದೆ. ಕೂಡಲೇ ಈ ರಸ್ತೆಗೆ ತೇಪೆ ಹಚ್ಚುವ ಕಾರ್ಯ ಆಗಬೇಕು ಎಂದು ಅಂಬುಲನ್ಸ್ ಚಾಲಕ ಪರಮೇಶ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.