ಹನೂರು: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮದಲ್ಲಿ ಎರಡು ದಿನಗಳಿಂದ ಬೆಂಕಿ ಹೊತ್ತಿ ಉರಿದಿದ್ದು ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮವಾಗಿದೆ.
ಮಲೆಮಹದೇಶ್ವರ ವನ್ಯಧಾಮದ ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಲಯ, ಕಾವೇರಿ ವನ್ಯಧಾಮದ ಕೌದಳ್ಳಿ ವನ್ಯಜೀವಿ ವಲಯದಲ್ಲಿ ಮಾರ್ಚ್ 26ರ ಸಂಜೆ ವೇಳೆಗೆ ಕಾಣಿಸಿಕೊಂಡ ಬೆಂಕಿ ಇಡೀ ಬೆಟ್ಟವನ್ನೆ ಆವರಿಸಿದೆ. ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಬೆಂಕಿ ನಿಯಂತ್ರಸುವಲ್ಲಿ ನಿರತರಾಗಿದ್ದಾರೆ.
ಗುಡ್ಡಗಳೇಲ್ಲ ಸೆಮಿ ಗ್ರೀನ್ ಫಾರೆಸ್ಟ್ ಆಗಿರುವುದರಿಂದ ಆಪಾರ ಪ್ರಮಾಣದ ಬಿದಿರು ಇದ್ದವು. ಕಳೆದ 10 ವರ್ಷಗಳ ಹಿಂದೆ ಬಿದಿರು ಹೂವು ಬಿಟ್ಟು ಸಂಪೂರ್ಣವಾಗಿ ಒಣಗಿ ಬಿದ್ದು ಹೋಗಿತ್ತು. ಒಣಗಿ ಬಿದ್ದ ಬಿದರಿಗೆ ಬೆಂಕಿ ತಾಗುತ್ತಿದ್ದಂತೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಬಿದಿರು ಸಿಡಿದು ಹತ್ತಾರು ಮೀಟರ್ ದೂರ ಹಾರುತ್ತಿರುವುದರಿಂದ ಕ್ಷಣಾರ್ಧದಲ್ಲಿ ಬೇರೆ ಗುಡ್ಡಕ್ಕೆ ಹಬ್ಬುತ್ತಿದೆ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಸಹಾಯಕರಾಗುತ್ತಿದ್ದಾರೆ. ಇದರ ಜೊತೆಗೆ ಹಗಲಿನ ವೇಳೆ ವಿಪರೀತ ಗಾಳಿ ಬೀಸುತ್ತಿರುವುದರಿಂದ ಆನೆ ಲದ್ದಿಗೆ ಬಿದ್ದ ಬೆಂಕಿಯ ಕಿಡಿ ಗಾಳಿ ಬಂದಾಗ ದೂರಕ್ಕೆ ಹಾರಿ ಹೋಗಿ ಬೆಂಕಿ ಹರಡಲಾರಂಭಿಸಿದೆ.
ಪ್ರಾರಂಭದಲ್ಲಿ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವನ್ಯಜೀವಿ ವಲಯದ ಅಸ್ತೂರು ಗಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಮಲೆ ಮಹದೇಶ್ವರ ವನ್ಯಧಾಮದ ಕಾಡಿನ ಬೋಳಿ, ದೊಡ್ಡ ಬೆಟ್ಟ, ದೊಡ್ಡಳ್ಳ ಬೆಟ್ಟ ಅರಣ್ಯ ಪ್ರದೇಶಕ್ಕೂ ವ್ಯಾಪಿಸಿದೆ. ಜೋರಾಗಿ ಬೀಸುವ ಗಾಳಿ ಮತ್ತು ಬಿಸಿಲಿನ ತಾಪದಿಂದ ಬೆಂಕಿ ಹರಡುತ್ತಿದ್ದು ದಟ್ಟ ಹೊಗೆ ಆವರಿಸಿದೆ. ಅಸ್ತೂರು ಗಸ್ತಿನಲ್ಲಿ ಒಣಗಿದ ಹುಲ್ಲು ಮತ್ತು ಮರಗಿಡಗಳು ಸುಟ್ಟು ಹೋಗಿದ್ದರೆ, ಹೆಚ್ಚು ಬಿದಿರು ಹೊಂದಿರುವ ಮಲೆಮಹದೇಶ್ವರ ವನ್ಯಧಾಮದ ಬೋಳಿ ಬೆಟ್ಟ ಪ್ರದೇಶ ಹೊತ್ತಿ ಉರಿದು ಬಿದಿರು ಸುಟ್ಟು ಹೋಗಿದೆ.
ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿದಂತೆ ಒಟ್ಟು 20 ಜನರು ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಯಲ್ಲಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹಾಗೂ ಕಾವೇರಿ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ವಲಯಾರಣ್ಯಾಧಿಕಾರಿಗಳು ಹಾಜರಿದ್ದು ಬೆಂಕಿ ನಂದಿಸಲು ಪ್ರಯಾಸ ಪಡುತ್ತಿದ್ದಾರೆ.
ಬುಧವಾರ ಎರಡು ವಿಭಾಗಗಳಿಂದಲೂ ಸಿಬ್ಬಂದಿ ಕರೆತಂದು ಬೆಂಕಿ ನಂದಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಮರೂರು, ಚಿಕ್ಕಮರೂರು, ಪೊನ್ನಾಚ್ಚಿ ಗ್ರಾಮಗಳಿಂದ ಸುಮಾರು 100ಕ್ಕೂ ಹೆಚ್ಚು ಮಂದಿ ಬೆಂಕಿ ಆರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಕೌಂಟರ್ ಫೈರ್ ಹಾಕುವ ಮೂಲಕ ಗುರುವಾರ ರಾತ್ರಿ ವೇಳೆಗೆ ಬಹುತೇಕ ಬೆಂಕಿಯನ್ನ ಹತೋಟಿಗೆ ತರಲು ಕ್ರಮ ವಹಿಸುವುದಾಗಿ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಜಾವಾಣಿಗೆ ತಿಳಿಸಿದರು.
* ಕ್ಷುಲಕ ಕರಾಣಕ್ಕಾಗಿ ಹಚ್ಚುತ್ತಿರುವ ಒಂದು ಬೆಂಕಿಯ ಕಿಡಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿ ಹೋಗಿದೆ. ಬೆಟ್ಟ ಗುಡ್ಡಗಳಲ್ಲಿ ಬೆಂಕಿ ವ್ಯಾಪಿಸುತ್ತಿರುವುದರಿಂದ ಮಾನವನ ಪ್ರಯತ್ನ ಸಾಲದಂತೆ ಆಗಿದೆ. ಬೆಂಕಿ ಹಚ್ಚಿರುವವರ ಬಗ್ಗೆ ಸುಳಿವು ದೊರೆತ್ತಿದ್ದು ಇನ್ನೇರಡು ದಿನಗಳಲ್ಲಿ ಬಂಧಿಸಲಾಗುವುದು.
–ವಿ. ಏಡುಕುಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆಮಹದೇಶ್ವರ ವನ್ಯಧಾಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.