ಕೊಳ್ಳೇಗಾಲ: ದೇಶದ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಧಾನ ಮಂತ್ರಿ ಮಾಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಚಾರ ಮಾಡಿ ಮತದಾರರನ್ನು ಮನವೊಲಿಸ ಬೇಕು ವಿಧಾನ ಪರಿಷತ್ ಸದಸ್ಯ ವಿಜಯಶಂಕರ್ ಹೇಳಿದರು.
ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಭಾರತದಲ್ಲಿ ಅತಿ ಹೆಚ್ಚು ಸಂಪತ್ತು ಇದ್ದು, ಅದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಸುಮಾರು ವರ್ಷಗಳ ಕಾಲದಿಂದಲೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡುತ್ತಿಲ್ಲ. ರಾಷ್ಟ್ರ ಮಟ್ಟದಲ್ಲಿ ಬದಲಾವಣೆ ಗಾಳಿ ಇದ್ದು, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆಯ ಅಭ್ಯರ್ಥಿ ಯನ್ನು ಪಕ್ಷದ ಮುಖಂಡರುಗಳು ತೀರ್ಮಾನಿಸುತ್ತಾರೆ. ಈ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ರೀತಿಯ ಗೊಂದಲ ಬೇಡ. ಯಾರೇ ಅಭ್ಯರ್ಥಿ ಆದರೂ ಗೆಲುವಿಗೆ ಶ್ರಮಿಸೋಣ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಮೋದಿಯವರು ಬೆಂಗಳೂರಿಗೆ ನ. 17 ರಂದು ಆಗಮಿಸುತ್ತಾರೆ. ಕಾರ್ಯಕರ್ತರು ರೂ 10 ಕೊಟ್ಟು ನೊಂದಾವಣೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮೈಸೂರು ಬಿಜೆಪಿಯ ಗ್ರಾಮಾಂತರ ಅಧ್ಯಕ್ಷ ಸಿದ್ದರಾಜು, ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ನಾಗರಾಜಪ್ಪ, ನೂರೊಂದುಶೆಟ್ಟಿ, ಕೊಳ್ಳೇಗಾಲ ಕ್ಷೇತ್ರ ಅಧ್ಯಕ್ಷ ಸತೀಶ್, ಟೌನ್ ಅಧ್ಯಕ್ಷೆ ನಾಗರಾಜು, ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ನಗರಸಭಾ ಸದಸ್ಯರುಗಳಾದ ಸುಧಾ ಸುಬ್ಬಣ್ಣ, ಅನುಸೂಯ, ವರದರಾಜು, ಶಿವಣ್ಣ ಇದ್ದರು.
ಸಭೆಯಲ್ಲಿ ಗಲಾಟೆ: ಸಭೆಯಲ್ಲಿ ವಿಜಯಶಂಕರ್ ಮಾತನಾಡುವ ವೇಳೆ ಮಾಜಿ ನಗರಸಭಾ ಸದಸ್ಯ ಜಿ.ಪಿ. ಶಿವಕುಮಾರ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹದೇವಸ್ವಾಮಿ ನಡುವೆ ಮಾತಿನ ಚಕಮಕಿ ನಡೆದು, ಹೊಡೆದಾಟದ ಹಂತಕ್ಕೂ ತಲುಪಿತ್ತು. ಅವರನ್ನು ಕಾರ್ಯಕರ್ತರು ಸಮಾಧಾನ ಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.