ADVERTISEMENT

ಪೆದ್ದನಪಾಳ್ಯ ಶಾಲೆಗೆ ಬಂದ 14 ಮಕ್ಕಳು

ಸುತ್ತುಗೋಡೆ ನಿರ್ಮಾಣ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 6:27 IST
Last Updated 5 ಡಿಸೆಂಬರ್ 2023, 6:27 IST
ಹನೂರು ತಾಲೂಕಿನ ಪೆದ್ದನಪಾಳ್ಯ ಶಾಲೆಗೆ ಸೋಮವಾರ ಮಕ್ಕಳು ಹಾಜರಾಗಿರುವುದು.
ಹನೂರು ತಾಲೂಕಿನ ಪೆದ್ದನಪಾಳ್ಯ ಶಾಲೆಗೆ ಸೋಮವಾರ ಮಕ್ಕಳು ಹಾಜರಾಗಿರುವುದು.   

ಹನೂರು: ತಾಲ್ಲೂಕಿನ ಪೆದ್ದನಪಾಳ್ಯ ಸರ್ಕಾರಿ ಶಾಲೆಗೆ ಸೋಮವಾರದಿಂದ ಮಕ್ಕಳು ಆಗಮಿಸಿದ್ದು, ಇದರ ಬೆನ್ನಲ್ಲೇ ಶಾಲೆ ಸುತ್ತಲೂ ಸುತ್ತುಗೋಡೆ ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಶಾಲೆಗೆ ಜಾಗ ನೀಡಿದ ವ್ಯಕ್ತಿ ಜಾಗ ತನ್ನದೆಂದು ಹೇಳಿ ಶಾಲಾ ಅವರಣದಲ್ಲಿ ಶೆಡ್ ನಿರ್ಮಿಸಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುವುದರ ಜತೆಗೆ ಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ. ಇದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು ಶಾಲೆಯಲ್ಲಿ‌ ಮಕ್ಕಳಿಗೆ ರಕ್ಷಣೆಯ ವ್ಯವಸ್ಥೆ ಮಾಡುವವರೆಗೆ ಎಂದು ಪೋಷಕರು ಕಳೆದ ಹತ್ತು ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ.

ಶನಿವಾರ ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪೋಷಕರೊಂದಿಗೆ ಸಭೆ ನಡೆಸಿ ಮನವೊಲಿಸುವ ಪಯತ್ನ ಮಾಡಿದ್ದರು. ಜಾಗ ನೀಡಿರುವ ವ್ಯಕ್ತಿ ಜತೆ ಮಾತನಾಡಿ ಶೀಘ್ರವಾಗಿ ಶೆಡ್ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆ ಸುತ್ತಲೂ ಸುತ್ತುಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ತ್ವರಿತಗತಿಯಲ್ಲಿ ಆರಂಭಿಸುವಂತೆ ಸೂಚಿಸಿದ್ದರು. ಜೊತೆಗೆ ಮಕ್ಕಳ ಕಲಿಕೆಗೆ ತೊಂದರೆಯಾಗುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದರು.

ADVERTISEMENT

ಅದರಂತೆ, ಸೋಮವಾರ ಎಂದಿನಂತೆ ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. 89 ಮಕ್ಕಳ ಪೈಕಿ 14 ಮಕ್ಕಳು ಮಾತ್ರ ಬಂದಿದ್ದಾರೆ. ಉಳಿದ ಮಕ್ಕಳು ಮಂಗಳವಾರದಿಂದ ಬರಲಿದ್ದಾರೆ ಎಂದು ಸಿಆರ್ ಪಿ ಷಣ್ಮುಗಂ ತಿಳಿಸಿದರು.

ಶಾಲೆಯಲ್ಲಿ 20 ವರ್ಷಗಳಿಂದ ಸಮಸ್ಯೆಯಿತ್ತು. ಸದ್ಯಕ್ಕೆ ತುರ್ತಾಗಿರುವ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಉಳಿದ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ಶಾಲೆ ಸುತ್ತುಗೋಡೆ ನಿರ್ಮಿಸಲು ಕಾಮಗಾರಿ ನಡೆಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.