ADVERTISEMENT

ಸ್ವಚ್ಛ ಭಾರತ ಯೋಜನೆ: ₹19.77 ಕೋಟಿಯ ಸಲಕರಣೆ ಖರೀದಿ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಹನೂರು ಪಟ್ಟಣ ಪಂಚಾಯಿತಿಗೆ ಪೂರೈಸುವ ಯೋಜನೆ

ಸೂರ್ಯನಾರಾಯಣ ವಿ.
Published 1 ಸೆಪ್ಟೆಂಬರ್ 2020, 19:30 IST
Last Updated 1 ಸೆಪ್ಟೆಂಬರ್ 2020, 19:30 IST
ಕಸ ಸಂಗ್ರಹಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ಒದಗಿಸಲಾಗಿರುವ ವಾಹನಗಳು
ಕಸ ಸಂಗ್ರಹಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ಒದಗಿಸಲಾಗಿರುವ ವಾಹನಗಳು   

ಚಾಮರಾಜನಗರ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ನಗರಾಭಿವೃದ್ಧಿ ಇಲಾಖೆಯು ಮತ್ತಷ್ಟು ಯಂತ್ರಗಳು ಹಾಗೂ ಇತರೆ ಸಲಕರಣೆಗಳನ್ನು ಖರೀದಿಸಲು ಮುಂದಾಗಿದ್ದು, ಇದಕ್ಕಾಗಿ ₹19.77 ಕೋಟಿ ವೆಚ್ಚ ಮಾಡಲಿದೆ.

ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ ಹಾಗೂ ಹನೂರು ಪಟ್ಟಣ ಪಂಚಾಯಿತಿಗಳಿಗಾಗಿ ವಿವಿಧ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ. ಯಳಂದೂರು ಪಟ್ಟಣ ಪಂಚಾಯಿತಿಗೂ ಅಗತ್ಯವಿರುವ ಸಾಧನಗಳ ಖರೀದಿಗೆ ಯೋಜನೆ ರೂಪಿಸಲಾಗಿದ್ದು, ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಅದಕ್ಕೂ ಶೀಘ್ರವೇ ಒಪ್ಪಿಗೆ ಸಿಗಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಇ–ಮಾರ್ಕೆಟ್‌ (ಜೆಇಎಮ್‌) ಪೋರ್ಟಲ್‌ ಮೂಲಕ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ. ಕೆಲವು ಸಿವಿಲ್‌ ಕೆಲಸಗಳು ಆರಂಭವಾಗಿದೆ. ಜೆಟ್ಟಿಂಗ್ ಯಂತ್ರ‌, ಟ್ರ್ಯಾಕ್ಟರ್‌, ಟ್ರೇಲರ್‌ ಸೇರಿದಂತೆ ಕೆಲವು ವಾಹನಗಳ ಖರೀದಿಗೆ ಈ–ಪೋರ್ಟಲ್‌ನಲ್ಲಿ ಈಗಾಗಲೇ ಕೆಲವರು ಬಿಡ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಲಾಕ್‌ಡೌನ್‌ ಆರಂಭಕ್ಕೂ ಮುನ್ನ ಮನೆ ಮನೆಗಳಿಂದ ಕಸ ಸಂಗ್ರಹಿಸುವುದಕ್ಕಾಗಿ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ₹1.36 ಕೋಟಿ ವೆಚ್ಚದಲ್ಲಿ 21 ಕಸ ಸಂಗ್ರಹಣೆ ವಾಹನಗಳನ್ನು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಖರೀದಿಸಲಾಗಿತ್ತು.

ಇದರ ಮುಂದುವರಿದ ಭಾಗವಾಗಿ ಹೊಸ ಖರೀದಿಗಳು ನಡೆಯುತ್ತಿವೆ. ಕೋವಿಡ್‌–19 ಹಾವಳಿಯಿಂದಾಗಿ ಖರೀದಿ ಕೊಂಚ ವಿಳಂಬವಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಮರಾಜನಗರ ನಗರಸಭೆಗೆ ₹7.34 ಕೋಟಿ, ಕೊಳ್ಳೇಗಾಲ ನಗರಸಭೆಗೆ ₹5.34 ಕೋಟಿ, ಗುಂಡ್ಲುಪೇಟೆ ಪುರಸಭೆಗೆ ₹4.56 ಕೋಟಿ, ಹನೂರು ಪಟ್ಟಣ ಪಂಚಾಯಿತಿಗೆ ₹2.539 ಕೋಟಿ ವೆಚ್ಚದಲ್ಲಿ ಈ ಯಂತ್ರಗಳು ಹಾಗೂ ಸಲಕರಣೆಗಳನ್ನು ಇಲಾಖೆ ಖರೀದಿಸಲಿದೆ.

ಯಾವುದೆಲ್ಲ ಸಲಕರಣೆಗಳು?: ಚಾಮರಾಜನಗರಕ್ಕೆ ಒಂದು ಸಕ್ಕಿಂಗ್‌ ಹಾಗೂ ಜೆಟ್ಟಿಂಗ್‌ ಯಂತ್ರ, ಮೂರು ಟ್ರೇಲರ್‌ ಸಹಿತ ಟ್ರ್ಯಾಕ್ಟರ್‌ಗಳು (ಚಾಮರಾಜನಗರ–1, ಕೊಳ್ಳೇಗಾಲ–2), ಮೂರು–ಬ್ಯಾಕ್‌ ಲೋಡರ್‌ ಮೆಶೀನ್‌ (ಚಾಮರಾಜನಗರ, ಕೊಳ್ಳೇಗಾಲ ಮತ್ತು ಹನೂರು ತಲಾ– 1), ನಾಲ್ಕು ಕಸ ಬೇರ್ಪಡಿಸುವಿಕೆ ಯಂತ್ರ (ಯಳಂದೂರು ಬಿಟ್ಟು ಉಳಿದೆಲ್ಲ ಸಂಸ್ಥೆಗಳಿಗೆ ಒಂದೊಂದು), ನಾಲ್ಕು ತೂಕ ಅಳೆಯುವ ಸೇತುವೆ (ತಲಾ ಒಂದೊಂದು), ಕಸವನ್ನು ಒತ್ತುವ ಯಂತ್ರಗಳು ನಾಲ್ಕು, ಎರಡು ದೊಡ್ಡ ಟ್ರೇಲರ್‌ಗಳು (ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗೆ ಒಂದೊಂದು), ನಾಲ್ಕು 62 ಕೆವಿಯ ಜನರೇಟರ್‌ಗಳನ್ನು(ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ ಒಂದರಂತೆ) ನಗರಾಭಿವೃದ್ಧಿ ಇಲಾಖೆ ಖರೀದಿಸಲಿದೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಸ ಸಂಗ್ರಹಣೆ ಹಾಗೂ ಅದರ ವೈಜ್ಞಾನಿಕ ವಿಲೇವಾರಿ ಮೊದಲಿಂದಲೂ ನಡೆಯುತ್ತಿಲ್ಲ. ಸ್ವಚ್ಛ ಭಾರತ ಅಭಿಯಾನ ಆರಂಭವಾದ ನಂತರ ಎಲ್ಲ ಸಂಸ್ಥೆಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಸ ಸಂಗ್ರಹಗಯನ್ನು ವ್ಯವಸ್ಥಿತಗೊಳಿಸಲು ಶ್ರಮಿಸುತ್ತಿವೆ. ಆದರೆ, ಮೂಲದಲ್ಲಿ ಕಸ ಬೇರ್ಪಡಿಸುವ ಕೆಲಸ ಇನ್ನೂ ಶೇ100ರಷ್ಟು ಆಗುತ್ತಿಲ್ಲ. ಯಂತ್ರಗಳ ಕೊರತೆಯಿಂದ ವೈಜ್ಞಾನಿಕ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ.

ಹೊಸ ಯಂತ್ರಗಳು ಹಾಗೂ ಇತರೆ ಸಲಕರಣೆಗಳು ಬಂದರೆ, ಕಸದ ನಿರ್ವಹಣೆ ಇನ್ನಷ್ಟು ವ್ಯವಸ್ಥಿತವಾಗಲಿದೆ. ನೈರ್ಮಲ್ಯ ಕಾಪಾಡಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳದ್ದು.

‘ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಯಂತ್ರಗಳು ಹಾಗೂ ಇತರೆ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ. ಜಿಲ್ಲೆಯ ನಗರ ಹಾಗೂ ಪಟ್ಟಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬೇಕಾದ ಎಲ್ಲ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಸ್ವಚ್ಛ ನಗರ ಹಾಗೂ ಪಟ್ಟಣಗಳನ್ನು ನಿರ್ಮಿಸುವ ನಮ್ಮ ಪ್ರಯತ್ನವನ್ನು ಮುಂದುವರಿಸುತ್ತೇವೆ’ ಎಂದು ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಕೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.