ADVERTISEMENT

ಬಸವಾಪುರ: 42 ಮಂದಿಗೆ ಹೆಜ್ಜೇನು ದಾಳಿ

ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಘಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 15:24 IST
Last Updated 6 ಜುಲೈ 2024, 15:24 IST
ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಭೇಟಿ ನೀಡಿ ಹೆಜ್ಜೇನು ದಾಳಿಗೆ ಒಳಗಾದವರ ಆರೋಗ್ಯ ವಿಚಾರಿಸಿದರು.
ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಭೇಟಿ ನೀಡಿ ಹೆಜ್ಜೇನು ದಾಳಿಗೆ ಒಳಗಾದವರ ಆರೋಗ್ಯ ವಿಚಾರಿಸಿದರು.   

ಗುಂಡ್ಲುಪೇಟೆ: ತಾಲ್ಲೂಕಿನ ಬಸವಾಪುರದಲ್ಲಿ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ 42 ಮಂದಿಯ ಮೇಲೆ ಹೆಜ್ಜೇನು ದಾಳಿ ನಡೆದಿದೆ.

ಹೆಜ್ಜೇನು ದಾಳಿಗೆ ಒಳಗಾದವರ ಪೈಕಿ 20ಕ್ಕೂ ಅಧಿಕ ಜನರು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಮಂಜುನಾಥ್ (30), ಶಿವಯ್ಯ (38), ಮುದ್ದಯ್ಯ (60), ಹೊನ್ನಯ್ಯ (42), ಮೂರ್ತಿ (55), ಪುಟ್ಟಮಾದಶೆಟ್ಟಿ (83), ಶಿವಯ್ಯ (45), ಚಿನ್ನಸ್ವಾಮಿ (55), ಉಮೇಶ್ (32), ರಾಜೇಶ್ (53), ಚಿಕ್ಕಯಾತಮ್ಮ (48), ಸರೋಜಮ್ಮ (40), ಪುಟ್ಟಹನುಮಮ್ಮ (40), ಚಂದ್ರಮ್ಮ (45), ಅಂಬಿಕಾ (34), ಲಲಿತಮ್ಮ (45), ರಾಜಮ್ಮ (45), ಜಯ (45), ಬೆಳ್ಳಮ್ಮ (65) ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಘಟನೆ ವಿವರ: ಬಸವಾಪುರ ಗ್ರಾಮದ ವೃದ್ಧರೊಬ್ಬರು ಶುಕ್ರವಾರ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾರ್ವಜನಿಕರು ಸ್ಮಶಾನಕ್ಕೆ ತೆರಳಿದ್ದರು. ಚಿತೆಗೆ ಬೆಂಕಿ ಹಚ್ಚುವ ವೇಳೆ ಎದ್ದ ಹೊಗೆಯಿಂದ ಹೆಜ್ಜೇನುಗಳು ಮೇಲೆದ್ದು ದಾಳಿ ನಡೆಸಿವೆ.

ಇದರಿಂದ ಜನರು ದಿಕ್ಕಾ‍ಪಾಲಾಗಿ ಓಡಿದ್ದಾರೆ. ಬೆಂಬಿಡದ ಹೆಜ್ಜೇನು 42 ಮಂದಿಯನ್ನು ಕಚ್ಚಿವೆ. ಕಡಿತಕ್ಕೊಳಗಾದವರ ಮುಖ, ಕೈ ಸೇರಿದಂತೆ ದೇಹದ ಭಾಗಗಳು ಊದಿಕೊಂಡಿವೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದ್ದು ಹೆಚ್ಚು ನೋವಿದ್ದವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ.

ತಾಲ್ಲೂಕು ಆರೋಗ್ಯಾಧಿಕಾರಿ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಹೆಜ್ಜೇನಿನ ಮುಳ್ಳುಗಳನ್ನು ದೇಹದ ಭಾಗಗಳಿಂದ ಸಂಪೂರ್ಣವಾಗಿ ತೆಗೆಯಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.