ADVERTISEMENT

ಆಕಸ್ಮಿಕವಾಗಿ ತುಳಿದ ರಾಜಕೀಯದ ಮೆಟ್ಟಿಲು

ವಕೀಲ ವೃತ್ತಿಯೇ ಸಾಕು; ರಾಜಕಾರಣ ಬೇಡ ಎಂದುಕೊಂಡಿದ್ದೆ: ಶಾಸಕ ಆರ್. ನರೇಂದ್ರ

ಅಮಿತ್ ಎಂ.ಎಸ್.
Published 11 ಫೆಬ್ರುವರಿ 2018, 9:36 IST
Last Updated 11 ಫೆಬ್ರುವರಿ 2018, 9:36 IST
ಆರ್. ನರೇಂದ್ರ
ಆರ್. ನರೇಂದ್ರ   

ಚಾಮರಾಜನಗರ: ಕುಟುಂಬಕ್ಕೆ ರಾಜಕಾರಣದ ನಂಟು ಹಲವು ದಶಕಗಳದ್ದಾದರೂ, ಹಾಲಿ ಶಾಸಕ ಆರ್. ನರೇಂದ್ರ ಅವರ ರಾಜಕೀಯ ಯಾನದ ಇತಿಹಾಸ ಚಿಕ್ಕದು. ವಕೀಲ ವೃತ್ತಿಯನ್ನು ಬಿಟ್ಟು ರಾಜಕೀಯಕ್ಕೆ ಬರಲು ಒಲ್ಲೆ ಎನ್ನುತ್ತಿದ್ದ ಅವರು, ಕಾಂಗ್ರೆಸ್‌ನ ಹಿರಿಯ ನಾಯಕರ ಒತ್ತಡಕ್ಕೆ ಮಣಿದು ಅಖಾಡಕ್ಕೆ ಇಳಿದವರು.

ಹನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತತ ಎರಡು ಬಾರಿ ವಿಧಾನಸಭೆ ಪ್ರವೇಶಿಸಿರುವ ಆರ್. ನರೇಂದ್ರ, ದೊಡ್ಡಪ್ಪ ಜಿ. ವೆಂಕಟೇಗೌಡ ಮತ್ತು ತಂದೆ ಜಿ. ರಾಜೂಗೌಡ ಅವರ ರಾಜಕೀಯ ಜೀವನದ ಯಶಸ್ಸನ್ನು ಮೆಟ್ಟಿಲನ್ನಾಗಿಸಿಕೊಂಡರು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1957ರಿಂದ ಇದುವರೆಗೆ ನಡೆದಿರುವ 13 ಚುನಾವಣೆ ಗಳಲ್ಲಿ ಜಿ. ವೆಂಕಟೇಗೌಡ ಎರಡು (ಪಕ್ಷೇತರರಾಗಿ) ಮತ್ತು ಜಿ. ರಾಜೂಗೌಡ ನಾಲ್ಕು (ಕಾಂಗ್ರೆಸ್‌) ಸೇರಿದಂತೆ 8 ಬಾರಿ ಈ ಕುಟುಂಬದವರೇ ಶಾಸಕರಾಗಿದ್ದಾರೆ.

ಕುಟುಂಬ ರಾಜಕಾರಣದ ಹಿನ್ನೆಲೆ ಬಲವಾಗಿದ್ದರೂ ನರೇಂದ್ರ ಅವರ ರಾಜಕೀಯದ ಮೊದಲ ಹೆಜ್ಜೆ ಅನಾಯಾಸವಾಗಿರಲಿಲ್ಲ. ಮೊದಲ ಪ್ರಯತ್ನದಲ್ಲಿ ಕಹಿ ಅನುಭವ ಪಡೆಯಬೇಕಾಯಿತು.

ADVERTISEMENT

‘ರಾಜಕೀಯದ ಕುರಿತು ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಪಂಚಾಯಿತಿ ಚುನಾವಣೆಯಲ್ಲಾದರೂ ಸ್ಪರ್ಧಿಸಲಿ ಎಂದು ತಂದೆಯ ಆಪ್ತರು ಹೇಳುತ್ತಿದ್ದರು. ಆದರೆ, ನನಗೆ ವಕೀಲ ವೃತ್ತಿಯೇ ಸಾಕು. ಮನೆಯಲ್ಲಿ ಇಬ್ಬರು ರಾಜಕಾರಣದಲ್ಲಿ ಇರುವುದು ಬೇಡ ಎಂಬ ತೀರ್ಮಾನ ತೆಗೆದುಕೊಂಡಿದ್ದೆ. 2004ರ ಚುನಾವಣೆ ಸಮೀಪಿಸುತ್ತಿತ್ತು. ತಂದೆ ರಾಜೂಗೌಡ ಕಣಕ್ಕೆ ಇಳಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಗ ಅವರು ಅನಾರೋಗ್ಯದಿಂದ ನಿಧನರಾದರು. ಆಗ ನೀನೇ ಸ್ಪರ್ಧಿಸಲೇಬೇಕು ಎಂದು ಎಸ್‌.ಎಂ. ಕೃಷ್ಣ, ಡಿ.ಕೆ. ಶಿವಕುಮಾರ್, ಆಸ್ಕರ್ ಫರ್ನಾಂಡಿಸ್, ವಿ. ಶ್ರೀನಿವಾಸಪ್ರಸಾದ್‌ ಮುಂತಾದ ಹಿರಿಯರು ಒತ್ತಾಯಿಸಿದರು. ಆ ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜಕೀಯದ ನಂಟು ಬೆಸೆದುಕೊಂಡಿತು’ ಎಂದು ಮೊದಲ ಚುನಾವಣೆಯ ಅನುಭವವನ್ನು ನರೇಂದ್ರ ಹಂಚಿಕೊಂಡರು.

‘ನಾಮಪತ್ರ ಸಲ್ಲಿಸಲು 15 ದಿನಗಳು ಮಾತ್ರ ಉಳಿದಿದ್ದವು. ಇಡೀ ಕ್ಷೇತ್ರವನ್ನು ಸುತ್ತಿ ಪ್ರಚಾರ ಮಾಡುವಷ್ಟು ಸಮಯವೂ ಇರಲಿಲ್ಲ. ಹೀಗಾಗಿ ಜನರನ್ನು ತಲುಪಲು ಸಾಧ್ಯವಾಗಲಿಲ್ಲ. ಪರಿಮಳಾ ನಾಗಪ್ಪ ಅವರ ಎದುರು 13,013 ಮತಗಳಿಂದ ಸೋಲನ್ನು ಅನುಭವಿಸಿದೆ. ಜನರಿಗೆ ನನ್ನ ಪರಿಚಯ ಇಲ್ಲದಿದ್ದರೂ ರಾಜೂಗೌಡ ಅವರ ಮಗ ಎಂಬ ಕಾರಣಕ್ಕೆ 48,613 ಮಂದಿ ನನಗೆ ಮತ ಹಾಕಿದರು’ ಎಂದು ಅವರು ಸ್ಮರಿಸಿದರು.

ಜಿ. ವೆಂಕಟೇಗೌಡ ಮತ್ತು ಎಸ್‌.ಎಂ. ಕೃಷ್ಣ ಇಬ್ಬರೂ ಸಹಪಾಠಿಗಳು. ಒಟ್ಟಿಗೆ ರಾಜಕಾರಣದ ಅನುಭವಗಳನ್ನು ಪಡೆದವರು. ಕೃಷ್ಣ ಅವರು ಕುಟುಂಬಕ್ಕೂ ಆತ್ಮೀಯರು. ರಾಜಕೀಯಕ್ಕೆ ಬರಲು ಮತ್ತು ಸೋಲು ಕಂಡ ಬಳಿಕವೂ ಉಳಿದುಕೊಳ್ಳಲು ಅವರೇ ಕಾರಣ ಎನ್ನುತ್ತಾರೆ ನರೇಂದ್ರ.

‘ಸೋತೆ ಎಂಬ ಬೇಸರ ಬೇಡ. ಈಗಿನಿಂದಲೇ ಜನರೊಟ್ಟಿಗೆ ಸಂಪರ್ಕ ಬೆಳೆಸಿಕೊಳ್ಳಲು ಪ್ರಾರಂಭಿಸು’ ಎಂದು ಎಸ್‌.ಎಂ. ಕೃಷ್ಣ ಸಲಹೆ ನೀಡಿದ್ದರು. ಈ ನಡುವೆ ವಕೀಲಿಕೆಗೆ ಮರಳಿದರೂ ಬಿಡುವು ಮಾಡಿಕೊಂಡು ಕ್ಷೇತ್ರದ ಮೂಲೆಮೂಲೆಗೆ ತೆರಳಿದೆ. 2008ರ ಚುನಾವಣೆಯಲ್ಲಿ ಪರಿಮಳಾ ನಾಗಪ್ಪ ಅವರ ಎದುರು ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಶಾಸಕನಾಗಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ ಗಳಿಗೆಯನ್ನು ಮೆಲುಕು ಹಾಕಿದರು. ಸಾಮಾನ್ಯವಾಗಿ ವಿಧಾನಸೌಧವನ್ನು ಮೊದಲ ಬಾರಿಗೆ ಪ್ರವೇಶಿಸುವ ಶಾಸಕರಿಗೆ ಒಂದು ತೆರನಾದ ಉದ್ವೇಗ, ಕಾತರ ಇರುತ್ತದೆ. ಆದರೆ, ಅದಾವುದೂ ತಮ್ಮಲ್ಲಿ ಇರಲೇ ಇಲ್ಲ ಎನ್ನುತ್ತಾರೆ ನರೇಂದ್ರ.

ಬಾಲ್ಯದಿಂದಲೂ ದೊಡ್ಡಪ್ಪ ಮತ್ತು ತಂದೆಯ ಜತೆಗೆ ಅನೇಕ ಬಾರಿ ವಿಧಾನಸೌಧದ ಪಡಸಾಲೆಯಲ್ಲಿ ಓಡಾಡಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದ್ದರು. ಶಾಸಕರ ಭವನದ ಕಾರಿಡಾರ್‌ಗಳು ಕೂಡ ಅವರಿಗೆ ಚಿರಪರಿಚಿತವಾಗಿದ್ದವು. ರಾಜಕೀಯ ಇಷ್ಟು ಹತ್ತಿರವಿದ್ದರೂ, ಅದರತ್ತ ಒಲವು ಮಾತ್ರ ಬೆಳೆದಿರಲಿಲ್ಲ. ಸಾಧ್ಯವಾದಷ್ಟೂ ಅದರಿಂದ ಅಂತರ ಕಾಯ್ದುಕೊಳ್ಳಲು ಬಯಸಿದ್ದಾಗಿ ಅವರು ತಿಳಿಸಿದರು.

ಶಾಸಕನಾಗಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಮಾರ್ಗದರ್ಶನ ನೀಡಿದವರು ಎಚ್‌.ಎಸ್‌. ಮಹದೇವ ಪ್ರಸಾದ್‌. ಎಸ್.ಎಂ. ಕೃಷ್ಣ ಆಗಾಗ್ಗೆ ಸಲಹೆಗಳನ್ನು ನೀಡುತ್ತಿದ್ದರು. 2013ರ ಚುನಾವಣೆಯಲ್ಲಿ ಮತ್ತೆ ಗೆದ್ದರೂ ಈ ಬಾರಿ ಗೆಲುವಿನ ಅಂತರ ತುಸು ಕಡಿಮೆಯಾಯಿತು.

ಜಿ. ವೆಂಕಟೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ 1957 ಮತ್ತು 1962ರಲ್ಲಿ ಶಾಸಕರಾಗಿದ್ದರು. 1968 ಮತ್ತು 1972ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಜಿ. ರಾಜೂಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 1978, 1985, 1989 ಮತ್ತು 1999ರ ಚುನಾವಣೆಗಳಲ್ಲಿ ಗೆದ್ದಿದ್ದರು.

ಎಸ್‌ಎಸ್‌ಎಲ್‌ಸಿವರೆಗೆ ಸಿಂಗನ ಲ್ಲೂರಿನಲ್ಲಿ ಓದಿದ ನರೇಂದ್ರ ಅವರು, ಮೈಸೂರಿನಲ್ಲಿ ಪಿಯುಸಿ ಪೂರೈಸಿದರು. ಬಳಿಕ ಕಾನೂನು ಪದವಿಗಾಗಿ ಬೆಂಗಳೂರಿಗೆ ತೆರಳಿದರು. 1987ರಲ್ಲಿ ಮೈಸೂರಿಗೆ ಮರಳಿ ಐದು ವರ್ಷ ಅಲ್ಲಿ ವಕೀಲಿಕೆ ಅಭ್ಯಾಸ ನಡೆಸಿದರು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ ಸಮಯದಲ್ಲಿಯೂ ವೃತ್ತಿಯನ್ನು ತ್ಯಜಿಸುವ ಮನಸ್ಸಿರಲಿಲ್ಲ.

‘ಮನೆಯಲ್ಲಿಯೇ ರಾಜಕಾರಣಿ ಗಳಿದ್ದರೂ ಅದನ್ನು ಇಷ್ಟಪಟ್ಟಿರಲಿಲ್ಲ. ಸ್ಥಳೀಯ ಮಟ್ಟದ ರಾಜಕಾರಣವೂ ಬೇಡವೆಂದಿದ್ದೆ. ನನ್ನದು ಹೋರಾಟದ ಬದುಕಲ್ಲ. ಆದರೆ, ದೊಡ್ಡಪ್ಪ ಮತ್ತು ತಂದೆ ಈ ಭಾಗದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಾಡಿದ ಕೆಲಸಗಳು, ಅವರ ಕಾರ್ಯವೈಖರಿ ಹಾಗೂ ಸಿದ್ಧಾಂತಗಳ ಪರಿಚಯವಿತ್ತು. ಅವು ರಾಜಕಾರಣಿಯಾಗಿ ಪರಿವರ್ತನೆ ಹೊಂದಲು ನೆರವಾದವು’ ಎಂದು ತಿಳಿಸಿದರು.
**
ಮೊದಲ ಅವಧಿಯಲ್ಲಿ ಅನುದಾನಗಳನ್ನು ತರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಈಗ ಸಾಕಷ್ಟು ಅನುದಾನಗಳನ್ನು ತಂದಿದ್ದೇನೆ. ಕೆಲಸ ತೃಪ್ತಿ ತಂದಿದೆ.
– ಆರ್. ನರೇಂದ್ರ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.