ADVERTISEMENT

ಚಾಮರಾಜನಗರ | 7 ತಿಂಗಳಲ್ಲಿ 84 ಎಚ್‌ಐವಿ ಸೋಂಕಿತರು ಪತ್ತೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 15:33 IST
Last Updated 29 ನವೆಂಬರ್ 2023, 15:33 IST
ಲೊಗೊ
ಲೊಗೊ   

ಚಾಮರಾಜನಗರ: ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 84 ಮಂದಿಗೆ ಎಚ್‌ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪೈಕಿ ಮೂವರು ಗರ್ಭಿಣಿಯರಿದ್ದಾರೆ. 

ಕಳೆದ ವರ್ಷ (2022–23) 58,332 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಪೈಕಿ 194 ಮಂದಿ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದರು. 16,684 ಗರ್ಭಿಣಿಯರನ್ನು ಎಚ್‌ಐವಿ ಪರೀಕ್ಷೆಗೆ ಒಳಪ‍ಡಿಸಲಾಗಿತ್ತು, ಈ ಪೈಕಿ ನಾಲ್ವರಲ್ಲಿ ಸೋಂಕು ಕಂಡು ಬಂದಿತ್ತು. 

ಏಡ್ಸ್‌ ತಡೆ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ಇಲಾಖೆಯು ಈ ಸಾಲಿನಲ್ಲಿ (ಅಕ್ಟೋಬರ್‌ 23ರವರೆಗೆ) 33,849 ಸಾಮಾನ್ಯ ಅಭ್ಯರ್ಥಿಗಳನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, 81 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 8,350 ಗರ್ಭಿಣಿಯರನ್ನು ಪರೀಕ್ಷೆ ನಡೆಸಲಾಗಿದ್ದು, ಮೂವರು ಸೋಂಕಿನಿಂದ ಬಳಲುತ್ತಿದ್ದಾರೆ. 

ADVERTISEMENT

ಜಿಲ್ಲೆಯಲ್ಲಿ 2008ರಿಂದ ಇಲ್ಲಿಯವರೆಗೆ 4,246 ಸಾಮಾನ್ಯ ಜನ ಮತ್ತು 230 ಗರ್ಭಿಣಿಯರು, ಸೇರಿದಂತೆ 4,476 ಮಂದಿಯಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ. ಈ ಪೈಕಿ 2,350 ಪುರುಷರು, 2,110 ಮಂದಿ ಮಹಿಳೆಯರು ಮತ್ತು 16 ಮಂದು ಲೈಂಗಿಕ ಅಲ್ಪಸಂಖ್ಯಾತರು. 

ತಾಲ್ಲೂಕುವಾರು: 2008ರಿಂದ 2023ರ ಅಕ್ಟೋಬರ್‌ವರೆಗೆ  ಚಾಮರಾಜನಗರ ತಾಲ್ಲೂಕಿನಲ್ಲಿ 2,218, ಗುಂಡ್ಲುಪೇಟೆಯಲ್ಲಿ 979, ಕೊಳ್ಳೇಗಾಲದಲ್ಲಿ 1,058, ಯಳಂದೂರು ತಾಲ್ಲೂಕಿನಲ್ಲಿ 221 ರೋಗಿಗಳಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ.

15 ವರ್ಷಗಳ ಅವಧಿಯಲ್ಲಿ 945 ಪುರುಷರು, 521 ಮಹಿಳೆಯರು, ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ 1,469 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 2,511 ಮಂದಿ ಎ.ಆರ್‌.ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಡಿ.1ರಂದು ನಡೆಯಲಿರುವ ವಿಶ್ವ ಏಡ್ಸ್‌ ದಿನ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಎಂ.ಎಸ್‌.ರವಿಕುಮಾರ್‌ ಅವರು ಈ ಮಾಹಿತಿಗಳನ್ನು ನೀಡಿದರು. 

‘ಅಸುರಕ್ಷಿತ ಲೈಂಗಿಕತೆ, ಮಾದಕ ವ್ಯಸನಿ ಸಿರಿಂಜ್ ಬದಲಾಯಿಸದೆ ಬಳಕೆ, ರಕ್ತದಾನ ಮಾಡುವುದರಿಂದ, ಎಚ್‌ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಏಡ್ಸ್ ಹರಡುತ್ತದೆ. ಎಚ್ಚರಿಕೆ ವಹಿಸಿದರೆ ಈ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು. ಜಿಲ್ಲೆಯಲ್ಲಿ ಇಲಾಖೆಯ ವತಿಯಿಂದ ವಿವಿಧ ಸೌಲಭ್ಯಗಳು ಲಭ್ಯವಿದೆ’ ಎಂದು ಅವರು ಹೇಳಿದರು. 

‘1986ರಲ್ಲಿ ದೇಶದಲ್ಲಿ ಮೊದಲ ಎಚ್‌ಐವಿ ಪ್ರಕರಣ ಕಂಡುಬಂತು. ನಮ್ಮ ಜಿಲ್ಲೆಯಲ್ಲಿ 2004ರಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು. 2004ರಿಂದ ಇಲ್ಲಿಯವರೆಗೆ 5,219 ಎಚ್‌ಐವಿ ಸೋಂಕಿತರು ನೋಂದಣಿಯಾಗಿದ್ದಾರೆ. ಇದರಲ್ಲಿ 1944 ಜನ ಮರಣ ಹೊಂದಿದ್ದರೆ, 2,640 ಜನರು ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ 0.23ರಷ್ಟು ಇದೆ’ ಎಂದು ಅವರು ವಿವರಿಸಿದರು. 

ಅರಿವು ಜಾಥಾ ವೇದಿಕೆ ಕಾರ್ಯಕ್ರಮ

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಶುಕ್ರವಾರ (ಡಿ.1) ನಗರದಲ್ಲಿ ಏಡ್ಸ್ ಅರಿವು ಜಾಥಾ ಹಾಗೂ ವೇದಿಕೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಡಾ. ರವಿಕುಮಾರ್ ತಿಳಿಸಿದರು. ‘ಅಂದು ಬೆಳಿಗ್ಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಾಥಾಕ್ಕೆ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒ ಡಿಎಚ್‌ಒ ಸೇರಿದಂತೆ ಇತರರು ಚಾಲನೆ ನೀಡಲಿದ್ದಾರೆ. ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. 11 ಗಂಟೆಗೆ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದರು. ‘ಜಾಥಾದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಲಿದ್ದು ನಾಟಕ ಪ್ರದರ್ಶನವೂ ಇರಲಿದೆ. ಅಲ್ಲದೇ ಐಸಿಟಿಸಿ ಎಆರ್‌ಟಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸನ್ಮಾನ ಮಾಡಲಾಗುವುದು. ಅಂದು ಸಂಜೆ 630ಕ್ಕೆ ಜಿಲ್ಲಾಡಳಿತ ಭವನದಿಂದ ಮೊಂಬತ್ತಿ ಮೆರವಣಿಗೆ ನಡೆಯಲಿದೆ’ ಎಂದರು. ಜಿಲ್ಲಾ ಎಚ್‌ಐವಿ ಮೇಲ್ವಿಚಾಲಕರಾದ ಮಹದೇವಪ್ರಸಾದ್ ಶೇಖರ್ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.