ADVERTISEMENT

ಗುಂಡಾಲ್ ಬಳಿ ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:26 IST
Last Updated 21 ಜೂನ್ 2024, 16:26 IST
ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿರುವ ಚಿರತೆ
ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿರುವ ಚಿರತೆ   

ಹನೂರು: ಗುಂಡಾಲ್ ಜಲಾಶಯದ ಕಾಡಂಚಿನ ತೋಟದ ಮನೆಗಳಿಗೆ ನುಗ್ಗಿ ಜಾನುವಾರುಗಳನ್ನು ತಿಂದು ರೈತರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

16 ದಿನ  ಕಾರ್ಯಾಚರಣೆ: ರೈತರ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಹಾಗೂ ಜನರಿಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಚರಣೆ ಆರಂಭಿಸಿತ್ತು. ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕಿ ದೀಪ್ ಜೆ. ಕಂಟ್ರಾಕ್ಟರ್‌  ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಾಸು ನೇತೃತ್ವದ ತಂಡ  5 ಫೈಬರ್ ಕೇಜುಗಳು,  2 ತುಮಕೂರು ಕೇಜುಗಳು, 35 ಕ್ಯಾಮೆರಾಗಳು ಹಾಗೂ ಮೈಸೂರಿನ ಚಿರತೆ ಕಾರ್ಯಪಡೆಗಳು (ಎಲ್.ಟಿ.ಎಫ್.), ಚಾಮರಾಜನಗರ ಆನೆ ಕಾರ್ಯಪಡೆ (ಇ.ಟಿ.ಎಫ್.), ಕೊಳ್ಳೇಗಾಲ ವನ್ಯಜೀವಿ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ  ಸೇರಿದಂತೆ 51 ಜನರ 16 ದಿನ ನಿರಂತರ ಕಾರ್ಯಾಚರಣೆ ನಡೆಸಿದ್ದರು.

ಕ್ಯಾಮೆರಾ ಟ್ರಾಪಿಂಗ್‌ನಲ್ಲಿ ಚಿರತೆಗೆ ರೇಡಿಯೋ ಕಾಲರ್ ಅಳವಡಿಸಿರುವುದು ಕಂಡುಬಂದಿ ದೆ. ಬಳಿಕ ಚಿರತೆಯ ಜಾಡು ಹಿಡಿದು ಕ್ಯಾಮೆರಾ  ಮತ್ತು ಕೇಜುಗಳನ್ನು ಸ್ಥಳಾಂತರಿಸಿ ಅಳವಡಿಸಲಾಗಿತ್ತು.  ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ ಗುಂಡಾಲ್–ಎ ಗಸ್ತಿನ  ವ್ಯಾಪ್ತಿಯ  ಜಮೀನಿನಲ್ಲಿ ಅಳವಡಿಸಲಾಗಿದ್ದ ಕೇಜಿನಲ್ಲಿ ಗುರುವಾರ ಸೆರೆಯಾಗಿದೆ.  ಮೈಸೂರಿನ ಚಿರತೆ ಕಾರ್ಯಪಡೆ (ಎಲ್.ಟಿ.ಎಫ್.)ನ ವಶಕ್ಕೆ ನೀಡಲಾಯಿತು.

ADVERTISEMENT

90 ಕಿ.ಮೀ ಯಾತ್ರೆ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆಹಿಡಿದು ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜಿವಿ ವಲಯದಲ್ಲಿ ಬಿಡಲಾಗಿತ್ತು.   90 ಕಿ.ಮೀ ದೂರದಿಂದ ಖಾಸಗಿ ಜಮೀನುಗಳ ಮೂಲಕ ಗುಂಡಾಲ್ ಜಲಾಶಯದ ತಪ್ಪಲಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಗುಂಡಾಲ್ ಜಲಾಶಯದ ತಪ್ಪಲಿನಲ್ಲಿ ಜಾನುವಾರುಗಳನ್ನು ತಿಂದು ಆತಂಕ‌ ಮೂಡಿಸಿದ್ದ ಚಿರತೆ ಕ್ಯಾಮರಾದಲ್ಲಿ ಸೆರೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.