ಚಾಮರಾಜನಗರ: ಗುತ್ತಿಗೆದಾರ ಪರವಾನಗಿ ಮಾಡಿಸಿಕೊಡಲು ಅರ್ಜಿದಾರರಿಂದ ₹7,500 ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಗೋವಿಂದಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಕೈಗೆ ಮಂಗಳವಾರ ಸಿಕ್ಕಿ ಬಿದ್ದಿದ್ದಾರೆ.
ಎಸಿಬಿ ಪೊಲೀಸರರು ಗೋವಿಂದಯ್ಯ ಅವರನ್ನು ಬಂಧಿಸಿದ್ದಾರೆ. ಲಂಚವಾಗಿ ಪಡೆದಿದ್ದ ನಗದನ್ನು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಅಟ್ಟುಗೂಳೀಪುರ ಗ್ರಾಮದ ನಿವಾಸಿಯೊಬ್ಬರು ಕ್ಲಾಸ್-4 ಗುತ್ತಿಗೆದಾರ ಪರವಾನಗಿ ಪಡೆಯಲು ಇದೇ 3ರಂದು ನಗರದಲ್ಲಿರುವ ಚಾಮರಾಜನಗರ ವಿಭಾಗದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಎಸ್‌ಡಿಎ ಆಗಿರುವ ಗೋವಿಂದಯ್ಯ ಅವರನ್ನು ಭೇಟಿ ಮಾಡಿದ್ದರು.
ಪರವಾನಗಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ ಗೋವಿಂದಯ್ಯ ಅವರು, ಅಗತ್ಯ ದಾಖಲೆಗಳನ್ನು ತಂದುಕೊಡುವಂತೆ ತಿಳಿಸಿದ್ದರು.
ಪರವಾನಗಿ ಬಯಸಿದ್ದ ವ್ಯಕ್ತಿ ಇದೇ 13ರಂದು ಪೂರಕ ದಾಖಲೆಗಳೊಂದಿಗೆ ಗೋವಿಂದಯ್ಯ ಅವರನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಪರವಾನಗಿ ಮಾಡಿಕೊಡಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ದುಡ್ಡನ್ನೂ ಪಡೆದಿದ್ದರು. 20ರಂದು (ಸೋಮವಾರ) ಮತ್ತೆ ₹7,500 ನೀಡುವಂತೆ ಗೋವಿಂದಯ್ಯ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅರ್ಜಿದಾರರು ಮಂಗಳವಾರ (ಜೂನ್ 21) ಬೆಳಿಗ್ಗೆ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
‘ಮಂಗಳವಾರ ಮಧ್ಯಾಹ್ನ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಗೋವಿಂದಯ್ಯ ಅವರು ದೂರುದಾರರಿಂದ ₹7,500 ಲಂಚ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ. ಲಂಚವಾಗಿ ಪಡೆದ ಹಣವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣವರ್, ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್, ಹೆಡ್ ಕಾನ್‌ಸ್ಟೆಬಲ್ ಮಹೇಶ್, ಕಾನ್‌ಸ್ಟೆಬಲ್‌ಗಳಾದ ಸತೀಶ್, ಕೃಷ್ಣಕುಮಾರ್, ಮಹದೇವ್, ಕಾರ್ತಿಕ್, ನಾಗಲಕ್ಷ್ಮಿ ಸಿಬ್ಬಂದಿ ನಾಗೇಂದ್ರ, ಮಹದೇವಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.