ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಸಮೀಪದ ವೈನ್ ಅಂಗಡಿಯಲ್ಲಿ ಅಕ್ರಮವಾಗಿ ಕೊಡಗು ಜಿಲ್ಲೆ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದರು.
ತಾಲ್ಲೂಕಿನ ಬೇಗೂರು ನಿವಾಸಿ ಕೆ.ದಿನೇಶ್ ನಾಯ್ಡು ಬಂಧಿತ ಆರೋಪಿ. ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾರಾಟಕ್ಕೆ ಇರಿಸಿದ್ದ 750 ಮಿಲಿ ಲೀ. 380 ಬಾಟಲಿಗಳು ಸೇರಿದಂತೆ ಒಟ್ಟು 285 ಲೀಟರ್ ವೈನ್ (ಒಟ್ಟು ಮೌಲ್ಯ ₹3 ಲಕ್ಷ ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಎಚ್.ಛಲವಾದಿ, ಉಪ ಆಯುಕ್ತ ನಾಗಶಯನ, ಚಾಮರಾಜನಗರ ಜಿಲ್ಲೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಆರ್.ಮಂಜುನಾಯ್ಕ, ವಲಯ ನೌಕರರಾದ ಅಬಕಾರಿ ಮುಖ್ಯ ಪೇದೆ ಭಾಸ್ಕರ್, ಅಬಕಾರಿ ಪೇದೆಗಳಾದ ಷಣ್ಮುಖ, ಕುಮಾರಸ್ವಾಮಿ, ಸಿದ್ದೇಶ್ ಮತ್ತು ವಾಹನ ಚಾಲಕ ಸೋಮಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.