ಚಾಮರಾಜನಗರ/ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಚಿತ್ರನಟ ಗಣೇಶ್ ಅವರು ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ವಾಸ ಹಾಗೂ ಕೃಷಿ ಉದ್ದೇಶಕ್ಕೆ ತಾತ್ಕಾಲಿಕ ಮನೆಯನ್ನು ನಿರ್ಮಿಸಲು ಗಣೇಶ್ ಅನುಮತಿ ಪಡೆದಿದ್ದಾರೆ. ಆದರೆ, ಅವರು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದಾರೆ’ ಎಂಬುದು ಆರೋಪ. ಅದಕ್ಕೆ ಪೂರಕವೆಂಬಂತೆ, ಕಟ್ಟಡದ ಅಡಿಪಾಯಕ್ಕಾಗಿ ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನು ಹಾಕಲಾಗಿದೆ. ಕಟ್ಟಡ ನಿರ್ಮಾಣ ಬಿರುಸಿನಿಂದ ಸಾಗಿದ್ದು, ಜೆಸಿಬಿಯನ್ನೂ ಬಳಸಲಾಗುತ್ತಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯ ಸರ್ವೆ ನಂಬರ್ 105ರಲ್ಲಿ 1 ಎಕರೆ 24 ಗುಂಟೆ ಜಮೀನಿದ್ದು, ವಾಸಕ್ಕೆ ಮನೆ ಮತ್ತು ತೋಟಗಾರಿಕೆ ಉದ್ದೇಶದಿಂದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಅನುಮತಿ ನೀಡಬೇಕು ಎಂದು ಗಣೇಶ್ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಪರಿಸರ ಸೂಕ್ಷ್ಮ ವಲಯ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಜಮೀನು ಇದೆ. ಅಧಿಸೂಚನೆ ಪ್ರಕಾರ, ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಶಾಶ್ವತ ಕಟ್ಟಡಗಳನ್ನೂ ನಿರ್ಮಿಸುವಂತಿಲ್ಲ.
ತಾತ್ಕಾಲಿಕ ಕಟ್ಟಡಕ್ಕಷ್ಟೇ ಅನುಮತಿ: ‘ತಾತ್ಕಾಲಿಕ ಕಟ್ಟಡವನ್ನು ವಸತಿ ಉದ್ದೇಶಕ್ಕಷ್ಟೇ ಬಳಸಬೇಕು. ವನ್ಯಜೀವಿಗಳ ಸಂಚಾರಕ್ಕೆ ಧಕ್ಕೆ ತರಕೂಡದು. ಸಮಿತಿ ಮುಂದೆ ಹಾಜರುಪಡಿಸಿದ್ದ ನೀಲನಕ್ಷೆಯಂತೆಯೇ ಮನೆ ಕಟ್ಟಬೇಕು. ಯಾವುದೇ ಕಾರಣಕ್ಕೂ ವಿಸ್ತೀರ್ಣ, ಮಾದರಿ ಬದಲಿಸುವಂತಿಲ್ಲ' ಎಂಬ ಷರತ್ತುಗಳನ್ನು ವಿಧಿಸಿ ಈ ವರ್ಷದ ಮಾರ್ಚ್ 15ರಂದು ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಯು ಗಣೇಶ್ ಅವರಿಗೆ ಅನುಮತಿ ನೀಡಿತ್ತು.
‘ಆದರೆ, ಜಮೀನಿನಲ್ಲಿ ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಅದನ್ನು ತಾತ್ಕಾಲಿಕ ಕಟ್ಟಡ ಎನ್ನಲು ಸಾಧ್ಯವಿಲ್ಲ. ಜಮೀನಿಗೆ ಸೋಲಾರ್ ಬೇಲಿಯನ್ನೂ ಹಾಕಲಾಗಿದೆ. ಇದು ಪರಿಸರ ಸೂಕ್ಷ್ಮ ವಲಯ ಮಾರ್ಗಸೂಚಿಗೆ ವಿರುದ್ಧ’ ಎಂದು ಪರಿಸರವಾದಿ ಜೋಸೆಫ್ ಹೂವರ್ 'ಪ್ರಜಾವಾಣಿ'ಗೆ ತಿಳಿಸಿದರು.
‘ಅನುಮತಿ ನೀಡುವ ಮೊದಲು ಬಂಡೀಪುರದ ನಿರ್ದೇಶಕರು ತಮ್ಮ ಕೆಳಹಂತದ ಅಧಿಕಾರಿಗಳ ಮೂಲಕ ಜಮೀನು ಪರಿಶೀಲಿಸಿ ವರದಿ ಪಡೆಯಬೇಕು. ಕಟ್ಟಡ ನಿರ್ಮಾಣದ ಷರತ್ತುಗಳನ್ನು ಸ್ಪಷ್ಟವಾಗಿ ವಿವರಿಸಬೇಕು. ಈ ಪ್ರಕರಣದಲ್ಲಿ ಇದೆಲ್ಲವನ್ನೂ ಪಾಲಿಸಲಾಗಿದೆಯೇ ಎಂಬುದು ಗೊತ್ತಿಲ್ಲ. ನಟ ಗಣೇಶ್‌ಗೂ ಇದರ ಬಗ್ಗೆ ಮಾಹಿತಿ ಇದೆಯೇ ಎಂಬುದು ತಿಳಿದಿಲ್ಲ. ಗೊತ್ತಿದ್ದೂ ಕಟ್ಟಡ ನಿರ್ಮಿಸಿದರೆ ದೊಡ್ಡ ತಪ್ಪಾಗುತ್ತದೆ’ ಎಂದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನಾ ನಿರ್ದೇಶಕ ಪಿ.ರಮೇಶ್ ಕುಮಾರ್, ‘ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಯಲ್ಲಿ ನಾನು ಸದಸ್ಯ ಕಾರ್ಯದರ್ಶಿ ಅಷ್ಟೇ. ಪ್ರಾದೇಶಿಕ ಆಯುಕ್ತರು ಮುಖ್ಯಸ್ಥರು. ಈ ಪ‍್ರಕರಣದಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡುವುದಾಗಿ ಹೇಳಿ ಗಣೇಶ್ ಅನುಮತಿ ಪಡೆದಿದ್ದಾರೆ. ಯಾವ ರೀತಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಪರಿಶೀಲನೆ ನಡೆಸುತ್ತೇವೆ’ ಎಂದು ಹೇಳಿದರು.
ಮಾನವ –ವನ್ಯಜೀವಿ ಸಂಘರ್ಷ ಹೆಚ್ಚಳ
‘ಬಂಡೀಪುರ ವ್ಯಾಪ್ತಿಯಲ್ಲಿ ಬೆಂಗಳೂರು ಸೇರಿದಂತೆ ದೂರದ ಊರುಗಳ ಸಿರಿವಂತರು, ಜಮೀನು ಖರೀದಿಸಿ ಮನೆ ನಿರ್ಮಿಸಿ ಜಮೀನು ಪೂರ್ತಿ ಬೇಲಿ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಅದರಿಂದ ಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಮಾನವ –ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ. ಅರಣ್ಯ ಇಲಾಖೆ ಕಡಿವಾಣ ಹಾಕಬೇಕು' ಎಂದು ಹೂವರ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.