ಚಾಮರಾಜನಗರ: ನಿವೃತ್ತ ನೌಕರರಿಗೆ ಸಂಸ್ಥೆಗಳು ಗ್ರ್ಯಾಚ್ಯುಟಿ (ವೇತನ ಉಪಧನ) ಮೊತ್ತವನ್ನು ಪೂರ್ಣವಾಗಿ ಪಾವತಿ ಮಾಡದೇ ಇರುವ ಸಂಬಂಧ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ಅದಾಲತ್ ನಡೆಸುವಂತೆ ಕಾರ್ಮಿಕ ಇಲಾಖೆಯು ಎಲ್ಲ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದೆ.
ಇದೇ 21ರೊಳಗೆ ಅದಾಲತ್‌ಗಳನ್ನು ನಡೆಸುವಂತೆ ಇಲಾಖೆ ಸೂಚನೆ ನೀಡಿದ್ದು, ಜಿಲ್ಲೆಯಲ್ಲೂ ಕಾರ್ಮಿಕ ಇಲಾಖೆ 20ರಂದು ಅದಲಾತ್ ಹಮ್ಮಿಕೊಂಡಿದೆ.
’ಜಿಲ್ಲೆಯಲ್ಲಿ ಗ್ರ್ಯಾಚ್ಯುಟಿ ಪಾವತಿ ಬಾಕಿಗೆ ಸಂಬಂಧಿಸಿದ 22 ಪ್ರಕರಣಗಳು ದಾಖಲಾಗಿವೆ. ಕಡಿಮೆ ಪ್ರಕರಣಗಳಿರುವುದರಿಂದ ಒಂದೇ ದಿನದಲ್ಲಿ (ಜ.20) ವಿಚಾರಣೆ ನಡೆಸಲಾಗುವುದು. ಅಗತ್ಯಬಿದ್ದರೆ 21ರಂದು ಅದಾಲತ್ ಮುಂದುವರೆಸಲಾಗುವುದು‘ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಮಹದೇವಸ್ವಾಮಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.
ಅದಾಲತ್‌ನಲ್ಲಿ ವಿಚಾರಣೆ ನಡೆಯಲಿರುವ ಎಲ್ಲ 22 ಪ್ರಕರಣಗಳು ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ್ದಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಡೆಯದ ವಿಚಾರಣೆ: ಸೇವೆಯಿಂದ ನಿವೃತ್ತಿಯಾದ ನೌಕರರಿಗೆ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಗ್ರ್ಯಾಚ್ಯುಟಿ ಪಾವತಿಸದಿದ್ದರೆ, ವೇತನ ಉಪಧನ ಪಾವತಿ ಕಾಯ್ದೆ 1972ರ ಅಡಿಯಲ್ಲಿ ನಿವೃತ್ತ ಕಾರ್ಮಿಕರು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಉಪಧನ ಪಾವತಿ ಪ್ರಾಧಿಕಾರದಲ್ಲಿ ದೂರು ನೀಡಲು ಅವಕಾಶ ಇದೆ.
ನಿವೃತ್ತ ನೌಕರರಿಂದ ಬಂದ ದೂರಿನ ಆಧಾರದಲ್ಲಿ ಕಾರ್ಮಿಕ ಅಧಿಕಾರಿಗಳು ಸಂಬಂಧಿಸಿದ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿ ನಿಗದಿತ ದಿನದಂದು ವಿಚಾರಣೆ ನಡೆಸುತ್ತಾರೆ. ಸಾಮಾನ್ಯವಾಗಿ ವಾರಕ್ಕೆ ಒಂದು ದಿನ ವಿಚಾರಣೆ ನಡೆಯುತ್ತದೆ.
ಜಿಲ್ಲೆಯಲ್ಲಿ ಮೂರೂವರೆ ವರ್ಷಗಳಿಂದ ಗ್ರ್ಯಾಚ್ಯುಟಿ ಪಾವತಿ ಬಾಕಿ ಪ್ರಕರಣಗಳ ವಿಚಾರಣೆ ನಡೆದಿಲ್ಲ. ಕಾಯಂ ಕಾರ್ಮಿಕ ಅಧಿಕಾರಿಗಳು ಇಲ್ಲದೇ ಇದ್ದುದರಿಂದ, ನಂತರದಲ್ಲಿ ಕೋವಿಡ್ ಕಾರಣಕ್ಕೆ ವಿಚಾರಣೆ ವಿಳಂಬವಾಗಿದೆ.
’ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳು ನೌಕರರು ನಿವೃತ್ತರಾದಾಗ ಗ್ರ್ಯಾಚ್ಯುಟಿ ಮೊತ್ತವನ್ನು ಪಾವತಿ ಮಾಡುತ್ತವೆ. ಆದರೆ ಕೆಲವು ಸಂದರ್ಭದಲ್ಲಿ ತಾಂತ್ರಿಕ ಕಾರಣಗಳಿಗೆ ಉದಾಹರಣೆ,ನಿವೃತ್ತ ನೌಕರರು ಹಲವು ದಿನಗಳ ಕಾಲ ರಜೆ ತೆಗೆದುಕೊಂಡಿದ್ದರೆ ಅಥವಾ ಅಮಾನತು ಆಗಿದ್ದರೆ, ಆ ಅವಧಿ ಇಲ್ಲವೇ ಕೂಲಿ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದರೆ ಅಂತಹವರಿಗೆ ಗ್ರ್ಯಾಚ್ಯುಟಿಯ ಎಲ್ಲ ಹಣವನ್ನು ಪಾವತಿಸಿರುವುದಿಲ್ಲ. ಇದನ್ನು ಪ್ರಶ್ನಿಸಿ ನಿವೃತ್ತ ನೌಕರರು ದೂರು ನೀಡಿರುತ್ತಾರೆ. ಅದನ್ನು ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥ ಪಡಿಸಬೇಕಾಗುತ್ತದೆ‘ ಎಂದು ಅಧಿಕಾರಿಗಳು ಮಾಹಿತಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಡಿಮೆ ಪ್ರಕರಣ
‘ಬೆಂಗಳೂರು, ಮೈಸೂರು ಸೇರಿದಂತೆ ದೊಡ್ಡ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ (22) ಪ್ರಕರಣಗಳಿವೆ. ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸುವುದಕ್ಕಾಗಿ ಇದೇ 10ರಿಂದ 21ರೊಳಗೆ ಅದಾಲತ್ ನಡೆಸುವಂತೆ ಪ್ರಧಾನ ಕಚೇರಿಯಿಂದ ಎಲ್ಲ ಜಿಲ್ಲೆಗಳಿಗೂ ಆದೇಶ ಬಂದಿದೆ. ಹೆಚ್ಚು ಪ್ರಕರಣಗಳು ಇರುವ ಕಡೆಗಳಲ್ಲಿ ಹೆಚ್ಚು ಅದಾಲತ್‌ಗಳು ನಡೆಯಲಿವೆ’ ಎಂದು ಕಾರ್ಮಿಕ ಅಧಿಕಾರಿ ಎಂ.ಮಹದೇವಸ್ವಾಮಿ ಅವರು ಮಾಹಿತಿ ನೀಡಿದರು.
’ದೂರುದಾರರು ಹಾಗೂ ಸಂಸ್ಥೆಗಳ ಪ್ರತಿನಿಧಿಯ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಆದೇಶ ನೀಡಲಾಗುತ್ತದೆ. ಒಂದು ವೇಳೆ ಸಂಸ್ಥೆಯು ಬಾಕಿ ಹಣ ಪಾವತಿಸಬೇಕಾಗಿ ಬಂದರೆ ಚೆಕ್ ಇಲ್ಲವೇ ಡಿಡಿ ಮೂಲಕ ಪಾವತಿಸಬಹುದು. ಇಲ್ಲದಿದ್ದರೆ ಕಾರ್ಮಿಕಾಧಿಕಾರಿ ಅವರ ಖಾತೆಗೆ ಹಣ ಹಾಕಬೇಕಾಗುತ್ತದೆ. ನಂತರ ಇಲಾಖೆಯು ನಿವೃತ್ತ ನೌಕರರಿಗೆ ನೀಡುವ ವ್ಯವಸ್ಥೆ ಮಾಡುತ್ತದೆ‘ ಎಂದು ಪಾವತಿ ಪ್ರಕ್ರಿಯೆಯನ್ನು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.