ADVERTISEMENT

ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ: ಸಂಭ್ರಮಾಚರಣೆ

ಸಿಹಿ ಹಂಚಿ ಸಂಭ್ರಮಿಸಿದ ಆದಿಜಾಂಬವ ಸಮುದಾಯದ ಮುಖಂಡರು, ಕೋಟೆ ಎಂ.ಶಿವಣ್ಣ ಭಾಗಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 14:05 IST
Last Updated 25 ಮಾರ್ಚ್ 2023, 14:05 IST
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಚಾಮರಾಜನಗರದಲ್ಲಿ ಆದಿ ಜಾಂಬವ ಸಮುದಾಯದ ಮುಖಂಡರು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಭ್ರಮಾಚರಣೆ ನಡೆಸಿದರು
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಚಾಮರಾಜನಗರದಲ್ಲಿ ಆದಿ ಜಾಂಬವ ಸಮುದಾಯದ ಮುಖಂಡರು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಭ್ರಮಾಚರಣೆ ನಡೆಸಿದರು   

ಚಾಮರಾಜನಗರ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಆದಿಜಾಂಬವ ಸಮುದಾಯದ ಮುಖಂಡರು ನಗರದಲ್ಲಿ ಶನಿವಾರ ಸಂಭ್ರಮಾಚರಣೆ ಮಾಡಿದರು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅವರು ಸಂಭ್ರಮಾಚರಣೆಯಲ್ಲಿ ಭಾಗಿಯಾದರು.

ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಸಮಾವೇಶಗೊಂಡ ಮುಖಂಡರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದರು. ಪರಸ್ಪರ ಸಿಹಿ ಹಂಚಿದರು. ಅಲ್ಲಿಂದ ಜಿಲ್ಲಾಡಳಿತ ಭವನದ ಮರೆಗೆ ಮೆರವಣಿಗೆ ನಡೆಸಿ ಭವನದ ಗೇಟಿನ ಮುಂದೆ ಪಟಾಗಿ ಸಿಡಿಸಿ, ರಾಜ್ಯ ಬಿಜೆಪಿ ಸರ್ಕಾರದ ಪರ ಘೋಷಣೆಗಳನ್ನು ಕೂಗಿದರು.

ADVERTISEMENT

ಕೋಟೆ ಎಂ.ಶಿವಣ್ಣ ಸೇರಿದಂತೆ ಇತರ ಮುಖಂಡರು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿದರು.

ನಂತರ ಮಾತನಾಡಿದ ಶಿವಣ್ಣ, ‘ಪರಿಜಾತಿ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕು ಎಂಬುದು 30 ವರ್ಷಗಳ ಬೇಡಿಕೆ. ಒಳ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬರಲಾಗಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಲವು ವರ್ಷಗಳ ಈ ಬೇಡಿಕೆಯನ್ನು ಈಡೇರಿಸುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಇಡೀ ರಾಜ್ಯದ ಮಾದಿಗ ಸಮುದಾಯಕ್ಕೆ ಅನುಕೂಲವಾಗಲಿದೆ. ಇಡೀ ಸಮುದಾಯ ಈ ಸರ್ಕಾರಕ್ಕೆ ಕೃತಜ್ಞವಾಗಿದೆ’ ಎಂದರು.

‘ಇಡೀ ರಾಜ್ಯದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಪರಿಶಿಷ್ಠ ಜಾತಿಯಲ್ಲಿ 101 ಜಾತಿಗಳಿದ್ದು, ಎಡಗೈ ಸಮಾಜಕ್ಕೆ ಅನ್ಯಾಯವಾಗುತ್ತಿತ್ತು. ಉದ್ಯೋಗ, ಶೈಕ್ಷಣಿಕವಾಗಿ, ಇತರ ಸವಲತ್ತುಗಳಾಗಲಿ, ರಾಜಕೀಯ ಸ್ಥಾನಮಾನಗಳು ದೊರಕುತ್ತಿರಲಿಲ್ಲ. ಸರ್ಕಾರದ ಈ ನಿರ್ಣಯದಿಂದ ಬಲಗೈ, ಎಡಗೈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುವಂತಾಗಿದೆ. ಲಂಬಾಣಿ, ಭೋವಿ ಸಮುದಾಯಗಳಿಗೂ ನ್ಯಾಯ ಸಿಕ್ಕಿದಂತಾಗಿದೆ. ಸರ್ಕಾರದ ಸವಲತ್ತುಗಳೂ ದೊರಕಿ ಸಮುದಾಯದವರು ಅಭಿವೃದ್ಧಿ ಹೊಂದಲಿದ್ದಾರೆ’ ಎಂದರು.

ಸಂಘ ಪರಿವಾರದ ಕೊಡುಗೆ ಅಪಾರ: ಒಳ ಮೀಸಲಾತಿ ಜಾರಿಗೆ ಸಂಘ ಪರಿವಾರ ಕೊಡುಗೆ ಅಪಾರವಾಗಿದೆ. ಸಂಘ ಪರಿವಾರದ ಮುಖಂಡರು ಇದರ ಪರವಾಗಿ ಇದ್ದರು. ರಾಜ್ಯ ಸರ್ಕಾರ ರಾಜ್ಯದಲ್ಲಿ ಮೀಸಲಾತಿ ಜಾರಿ ಮಾಡುವಾಗ ಎಡಗೈ ಸಮುದಾಯಕ್ಕೆ ಶೇ 6ರಷ್ಠು, ಬಲಗೈ ಸಮುದಾಯಕ್ಕೆ ಶೇ 5.5ರಷ್ಟು, ಸ್ಪೃಶ್ಯ ಸಮುದಾಯಕ್ಕೆ ಶೇ 4ರಷ್ಟು ಇತರೆ ಸಮುದಾಯಕ್ಕೆ ಶೇ 1ರಷ್ಟು ನೀಡಿ ಇರುವ ಶೇ 17ರಷ್ಠು ಮೀಸಲಾತಿಯನ್ನು ಎಲ್ಲರಿಗೂ ಹಂಚಿ ಸಮುದಾಯಕ್ಕೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದಾರೆ’ ಎಂದರು.

‘ಡಾ.ಬಿ.ಆರ್‌.ಅಂಬೇಡ್ಕರ್ ಅವರ ಸಂವಿಧಾನದಡಿ ಸಾಮಾಜಿಕ ನ್ಯಾಯ ಕೊಡಬೇಕು ಎಲ್ಲ ವರ್ಗದವರಿಗೆ ಸಮಾನತೆ ಸಿಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಅನುಮೋದನೆ ಪಡೆದು ಜಾರಿ ಮಾಡುವುದಾಗಿ ತಿಳಿಸಿದ್ದಾರೆ’ ಎಂದರು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖಂಡರಾದ ಆರ್.ಎಂ.ಕಾಂತರಾಜು, ಪಿಎನ್‌ಟಿ ರಾಚಪ್ಪ, ಎಲ್‌ಐಸಿ ರಾಜಣ್ಣ, ಪಾಳ್ಯ ರಾಚಯ್ಯ, ಹಸುಗೂಲಿ ಸಿದ್ದಯ್ಯ, ಎಂ.ರಾಜು, ಎಂ.ಶಿವಕುಮಾರ್, ಲಿಂಗರಾಜು, ಗುರುಸ್ವಾಮಿ, ಮಹದೇವು, ಮಹೇಶ್, ಕಳ್ಳಿಗೌಡನಹಳ್ಳಿ ಸಿದ್ದರಾಜು, ಎ.ಕಾಮಗೆರೆ ಮಹದೇವು, ಹನೂರು ಗುರುಸ್ವಾಮಿ, ಜಗದೀಶ್, ಸಂತೇಮರಹಳ್ಳಿ ಶಿವಯ್ಯ, ಸತೀಶ್, ಶಿವಣ್ಣ, ಬಿಸಲವಾಡಿ ಸಿದ್ದರಾಜು, ಬಸವನಪುರ ಚಿನ್ನಸ್ವಾಮಿ, ಪುಟ್ಟಮಾದಯ್ಯ, ಡ್ಯಾನ್ಸ್ ಬಸವರಾಜು ಇದ್ದರು.

‘ಒಳ ಮೀಸಲಾತಿ: ಐತಿಹಾಸಿಕ ನಿರ್ಣಯ’

‘30 ವರ್ಷಗಳ ನಿರಂತರ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು ಸ್ವಾಗತಾರ್ಹ. ಇದೊಂದು ಐತಿಹಾಸಿಕ, ಕ್ರಾಂತಿಕಾರಕ ನಿರ್ಣಯ’ ಎಂದು ಪರಿಶಿಷ್ಟ ಜಾತಿಗಳ ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಬೂದಿತಿಟ್ಟು ರಾಜೇಂದ್ರ ಶನಿವಾರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ದಲಿತರ ಐಕ್ಯತೆ ಮತ್ತು ಸಮಗ್ರ ಅಭಿವೃದ್ಧಿಗೆ ಒಳ ಮೀಸಲಾತಿ ಅವಶ್ಯಕತೆ ಇದೆ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಶಿಫಾರಸು ನನೆಗುದಿಗೆ ಬೀಳದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು’ ಎಂದರು.

1990ರಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ಒಳ ಮೀಸಲಾತಿ ಹೋರಾಟ ಹೋರಾಟ ಮಾಡಲಾಗಿತ್ತು. 1992ರಲ್ಲಿ ಕರ್ನಾಟಕದಲ್ಲೂ ಆರಂಭವಾಯಿತು. ಮಾದಿಗ ದಂಡೋರ್ ನೇತೃತ್ವದಲ್ಲಿ ಹೋರಾಟ ಪ್ರಾರಂಭವಾಗಿತ್ತು. 2005ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ನ್ಯಾಯಮೂರ್ತಿ ಸದಾಶಿವ ನೇತೃತ್ವದಲ್ಲಿ ಸದಾಶಿವ ಆಯೋಗ ರಚನೆ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಈ ಆಯೋಗ ವರದಿ ಸಲ್ಲಿಸಿತ್ತು’ ಎಂದರು.

ವೇದಿಕೆಯ ಗೌರವಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ‘ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಸ್ತಾವವನ್ನು ಬಸವರಾಜ ಬೊಮ್ಮಾಯಿ ಕಾರ್ಯರೂಪಕ್ಕೆ ತಂದಿದ್ದಾರೆ’ ಎಂದರು.

ವೇದಿಕೆಯ ಗೌರವ ಸಲಹೆಗಾರ, ನಗರಸಭಾ ಸದಸ್ಯ ಮಹದೇವಯ್ಯ, ವೇದಿಕೆಯ ಸಂಚಾಲಕ ಚಾ.ಗು.ನಾಗರಾಜು, ಎಚ್.ಮೂರ್ತಿ, ಸಹಕಾರ್ಯದರ್ಶಿ ಪಿ.ಶಿವಮಲ್ಲು, ಖಜಾಂಚಿ ಸಿ.ಚೆನ್ನಬಸವಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.