ADVERTISEMENT

ಮೂಲಸೌಕರ್ಯ ಕೊರತೆ ನೆಪ: ನರ್ಸಿಂಗ್‌ ಶಾಲೆಗೆ ಪ್ರವೇಶ ಇಲ್ಲ

ಸಚಿವರ ಪತ್ರಕ್ಕೂ ಬೆಲೆ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 14:58 IST
Last Updated 20 ಸೆಪ್ಟೆಂಬರ್ 2018, 14:58 IST
ಚಾಮರಾಜನಗರದಲ್ಲಿ ಇರುವ ನರ್ಸಿಂಗ್‌ ಶಾಲಾ ಕಟ್ಟಡ
ಚಾಮರಾಜನಗರದಲ್ಲಿ ಇರುವ ನರ್ಸಿಂಗ್‌ ಶಾಲಾ ಕಟ್ಟಡ   

ಚಾಮರಾಜನರ: ಸಿಬ್ಬಂದಿ ಮತ್ತುಮೂಲಸೌಕರ್ಯ ಕೊರತೆಯ ಕಾರಣದಿಂದ ಜಿಲ್ಲೆಯ ಏಕೈಕ ಸರ್ಕಾರಿಶುಶ್ರೂಷಕರ ತರಬೇತಿ ಶಾಲೆಗೆ (ನರ್ಸಿಂಗ್‌ ಶಾಲೆ) ಈ ವರ್ಷ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

ಸದ್ಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಡಿಪ್ಲೊಮಾ ಇನ್‌ ನರ್ಸಿಂಗ್‌ ಮತ್ತು ಮಿಡ್‌ವೈಫರಿ ಕೋರ್ಸ್‌ನ (ಜಿಎನ್‌ಎಂ) ಪ್ರವೇಶಕ್ಕೆ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸುತ್ತಿದೆ. ವಿದ್ಯಾರ್ಥಿಗಳ ಪಟ್ಟಿ ಪ್ರಕಟಗೊಂಡಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ. ಈಗಾಗಲೇ, 17 ಮಂದಿ ಸೇವಾನಿರತ ಕಿರಿಯ ಶುಶ್ರೂಷಕರಿಗೆ (ಎಎನ್‌ಎಂ) ಪ್ರವೇಶ ಕೌನ್ಸೆಲಿಂಗ್‌ ನಡೆದಿದ್ದು, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಯ (ಬೆಂಗಳೂರಿನ ಕೆಸಿಜಿ, ಬೀದರ್‌, ಗದಗ ಮತ್ತು ಕಾರವಾರ) ನರ್ಸಿಂಗ್‌ ಶಾಲೆಯ ಹೆಸರುಗಳು, ಪ್ರವೇಶ ಪಡೆಯಲು ಇಚ್ಛಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಇರಲಿಲ್ಲ.

ಮೂಲಸೌಕರ್ಯಗಳ ಕೊರತೆ ಇರುವುದರಿಂದ ಈ ವರ್ಷ ಇಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ತಡೆ ಹಿಡಿಯುವುದು ಸಮಂಜಸ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮೇ 2ರಂದು ಪತ್ರಬರೆದಿದ್ದರು.

ADVERTISEMENT

ಆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮತ್ತು ಸಂಸದ ಆರ್‌. ಧ್ರುವನಾರಾಯಣ ಅವರು ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

‘ಸಂಸ್ಥೆಯಲ್ಲಿ ಅಗತ್ಯವಾದ ಮೂಲಸೌಕರ್ಯ ಇದೆ. ಹಾಗಾಗಿ, ಪ್ರವೇಶ ತಡೆ ಹಿಡಿಯಬಾರದು’ ಎಂದು ಪುಟ್ಟರಂಗಶೆಟ್ಟಿ ಅವರು ಜೂನ್‌ 30ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಜುಲೈ 6ರಂದು ಪ್ರತಿಕ್ರಿಯಿಸಿದ್ದ ಸಚಿವರು, ಪ್ರವೇಶಕ್ಕೆ ತಡೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು.

ನಂಜುಂಡಪ್ಪ ವರದಿ ಆಧಾರದಲ್ಲಿ ಜಿಲ್ಲೆಗೆ 2010ರಲ್ಲಿ ಎಎನ್ಎಂ ಶಾಲೆ ಆರಂಭವಾಗಿತ್ತು. 2016ರಲ್ಲಿ ಈ ಶಾಲೆಯನ್ನು ಜಿಎನ್‌ಎಂ ನರ್ಸಿಂಗ್‌ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಆದರೆ, ಮೂಲಸೌಕರ್ಯದ ಕೊರತೆ ನೆಪವೊಡ್ಡಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ನಿರಾಕರಿಸಲಾಗುತ್ತಿದೆ. ಇಷ್ಟೂಮೂಲಸೌಕರ್ಯ ಇಲ್ಲದ ಬೇರೆ ಜಿಲ್ಲೆಗಳಲ್ಲಿ ಪ್ರವೇಶಾತಿಗೆ ಅವಕಾಶ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಂ. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

40 ವಿದ್ಯಾರ್ಥಿಗಳ ಪ್ರವೇಶಕ್ಕೆ ಇಲ್ಲಿ ಅವಕಾಶ ಇದೆ. ಇಲಾಖೆಯ ನಿರ್ಧಾರದಿಂದ 40 ಬಡ ವಿದ್ಯಾರ್ಥಿಗಳು ನರ್ಸಿಂಗ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದಾರೆ. ಆದರೆ, ನಂತರ ಈ ಬಗ್ಗೆ ಗಮನ ನೀಡಿಲ್ಲ ಎಂದು ಅವರು ದೂರಿದರು.

ಈಗ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ಸಚಿವರು, ಸಂಸದರು ಮತ್ತು ಸರ್ಕಾರ ಮನಸು ಮಾಡಿದರೆ ಪ್ರವೇಶ ಪ್ರಕ್ರಿಯೆಗೆ ಅವಕಾಶ ಸಿಗುವಂತೆ ಮಾಡಬಹುದು ಎಂದು ಹೇಳಿದರು.

‘ಸಂಸ್ಥೆ ಬಂದ್‌ ಆಗುವುದಿಲ್ಲ’

ಸಂಸ್ಥೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ.ಈ ವರ್ಷ ಪ್ರವೇಶ ಪ್ರಕ್ರಿಯೆ ನಡೆಯದಿದ್ದರೆ, ಸಂಸ್ಥೆ ಬಂದ್‌ ಆಗುತ್ತದೆ ಎಂದಲ್ಲ. ಸಿಬ್ಬಂದಿ ಹಾಗೂ ಮೂಲಸೌಕರ್ಯದ ಕೊರತೆ ಇರುವುದರಿಂದ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ಆಯುಕ್ತರ ಮಟ್ಟದಲ್ಲಿ ವ್ಯಕ್ತವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಉಪ ನಿರ್ದೇಶಕಿ ಡಾ.ಸುಜಾತಾ ತಿಳಿಸಿದರು.

‘ನಾವು ವಿದ್ಯಾರ್ಥಿಗಳ ಹಿತದೃಷ್ಟಿಯನ್ನೂ ನೋಡಬೇಕಾಗುತ್ತದೆ. ಸೌಲಭ್ಯಗಳಿಲ್ಲದೆ ಅವರಿಗೆ ತೊಂದರೆ ಆಗಬಾರದು. ಅನುದಾನದ ಕೊರತೆ ಇದೆ.ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಸಂಸದರು ಹಾಗೂ ಸಚಿವರು ಹೇಳಿದ್ದಾರೆ. ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಸಾಧ್ಯವಾದರೆ ಸಂಸ್ಥೆಯ ನಿರ್ವಹಣೆಗೆ ಅನುಕೂಲವಾಗುತ್ತದೆ. ಈ ವರ್ಷವೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲುನಾವು ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.