ADVERTISEMENT

ಕೊಳ್ಳೇಗಾಲ: ಈಸ್ಟರ್‌ ಹಬ್ಬದ ಸಂಭ್ರಮಕ್ಕೆ ಸಿದ್ಧತೆ

ಏಸುಕ್ರಿಸ್ತ ಪುನರುತ್ಥಾನ ಹೊಂದಿದ ದಿನ, ಕ್ರಿಶ್ಚಿಯನ್ನರ ಪ್ರಮುಖ ಹಬ್ಬ

ಅವಿನ್ ಪ್ರಕಾಶ್
Published 17 ಏಪ್ರಿಲ್ 2022, 5:04 IST
Last Updated 17 ಏಪ್ರಿಲ್ 2022, 5:04 IST
ಈಸ್ಟರ್‌ ಹಬ್ಬದ ಅಂಗವಾಗಿ ಕೊಳ್ಳೇಗಾಲದ ಸಂತ ಫ್ರಾನ್ಸಿಸ್‌ ಅಸ್ಸಿಸಿ ಚರ್ಚ್‌ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ
ಈಸ್ಟರ್‌ ಹಬ್ಬದ ಅಂಗವಾಗಿ ಕೊಳ್ಳೇಗಾಲದ ಸಂತ ಫ್ರಾನ್ಸಿಸ್‌ ಅಸ್ಸಿಸಿ ಚರ್ಚ್‌ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ   

ಕೊಳ್ಳೇಗಾಲ: ಏಸುಕ್ರಿಸ್ತ ಪುನರುತ್ಥಾನ ದಿನದ ಹಬ್ಬ ಈಸ್ಟರ್‌ ಅನ್ನು ಆಚರಿಸಲು ಜಿಲ್ಲೆಯ ಕ್ರಿಶ್ಚಿಯನ್ನರು ಸಿದ್ಧತೆ ನಡೆಸಿದ್ದಾರೆ.

ಏಸು ಶಿಲುಬೆಗೆ ಏರಿದ ದಿನವನ್ನು ಶುಭ ಶುಕ್ರವಾರವಾಗಿ (ಗುಡ್‌ ಫ್ರೈಡೆ) ಆಚರಿಸಲಾಗುತ್ತದೆ. ಶಿಲುಬೆಗೆ ಏರಿ ಪ್ರಾಣ ಕಳೆದುಕೊಂಡ ಮೂರು ದಿನಗಳ ಬಳಿಕ ಏಸು ಮತ್ತೆ ಪುನರುತ್ಥಾನ ಹೊಂದುತ್ತಾನೆ ಎಂಬುದು ಕ್ರಿಶ್ಚಿಯನ್ನರ ನಂಬಿಕೆ.

ಆ ದಿನವನ್ನು ಪವಿತ್ರ ಭಾನುವಾರ ಅಥವಾ ಈಸ್ಟರ್‌ ಸಂಡೆಯಾಗಿ ಆಚರಿಸುತ್ತಾರೆ. ಕ್ರಿಶ್ಚಿಯನ್ನರ ಪ್ರಮುಖ ಹಬ್ಬಗಳಲ್ಲಿ ಇದು ಕೂಡ ಒಂದು. ಹಾಗಾಗಿ, ಇದನ್ನು ಅದ್ದೂರಿಯಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಅದ್ದೂರಿ ಆಚರಣೆಗೆ ಅವಕಾಶ ಇರಲಿಲ್ಲ. ಈ ಬಾರಿ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

40 ದಿನಗಳ ವ್ರತ: ಈಸ್ಟರ್‌ ಆಚರಿಸಲು ಕ್ರಿಶ್ಚಿಯನ್ನರು 40 ದಿನಗಳಿಂದ ಸಿದ್ಧತೆ ನಡೆಸುತ್ತಾರೆ. ಉಪವಾಸ, ದಾನ ಧರ್ಮದಲ್ಲಿ ತೊಡಗುತ್ತಾರೆ.

‘ಬೂದಿ ಬುಧವಾರದಿಂದ (ಆ್ಯಶ್‌ ವೆಡ್ನೆಸ್‌ಡೇ) ಶುಭಶುಕ್ರವಾರದವರೆಗೆ 40 ದಿನಗಳ ಕಾಲ ವಿಶೇಷ ಪ್ರಾರ್ಥನೆ, ತ್ಯಾಗ, ದೇಹ ದಂಡನೆ ವ್ರತ, ಮಾಂಸಾಹಾರ ತ್ಯಜಿಸುವುದು, ಪ್ರತಿ ದಿನ ಬೆಳಿಗಿನ ಜಾವ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ’ ಎಂದು ಕೊಳ್ಳೇಗಾಲದ ದಿವ್ಯಕುಮಾರ್‌ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಎರಡು ಹಬ್ಬಗಳು: ಜಗತ್ತಿನಾದ್ಯಂತ ಕ್ರಿಶ್ಚಿಯನ್ನರು ಏಸುಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್‌ ಹಾಗೂ ಆತನ ಪುನರುತ್ಥಾನದ ದಿನ ಈಸ್ಟರ್‌ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈಸ್ಟರ್‌ ಹಬ್ಬವನ್ನು ಪಾಸ್ಕಾ ಹಬ್ಬ ಅಥವಾ ಪುನರುತ್ಥಾನ ಹಬ್ಬ ಎಂದು ಕರೆಯಲಾಗುತ್ತದೆ.

ಅಲಂಕಾರಕ್ಕೆ ಒತ್ತು: ಈಸ್ಟರ್‌ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಚರ್ಚ್‌ಗಳನ್ನು ಹೂಗಳಿಂದ ಅಲಂಕರಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.

ನಗರದ ಬೆತೆಲ್‌ ಲೂಥರನ್ ಚರ್ಚ್, ಸಂತ ಪ್ರಾನ್ಸಿಸ್ ಅಸ್ಸಿಸಿ ದೇವಾಲಯ, ಸಿಎಸ್ಐ ಚರ್ಚ್, ಎಸ್.ಡಿ.ಎ ಚರ್ಚ್, ಕಲ್ವಾರಿ ಎ.ಜೆ ಚರ್ಚ್, ಬ್ರದರನ್ ಸಭೆ, ನ್ಯೂ ಅಪೋಸ್ತ ಚರ್ಚ್, ಸೇರಿದಂತೆ ನಗರದ ಚರ್ಚ್‍ಗಳಲ್ಲಿ ಮಲ್ಲಿಗೆ ಹೂ ಮತ್ತು ಕನಕಾಂಬರ ಹೂಗಳಿಂದ ಸಿಂಗಾರ ಮಾಡುತ್ತಾರೆ.

‘ಕೆಲವು ಚರ್ಚ್‍ಗಳಲ್ಲಿ ಶನಿವಾರ ರಾತ್ರಿಯೂ ವಿಶೇಷ ಪೂಜೆ ನಡೆಯುತ್ತದೆ. ಭಾನುವಾರ ವಿಶೇಷ ಆರಾಧನೆ ನಡೆಸಿ, ವಿಶೇಷ ಗೀತೆಗಳನ್ನು ಹಾಡುತ್ತಾರೆ. ಜೊತೆಗೆ ಪ್ರಾರ್ಥನೆ ಮುಗಿದ ನಂತರ ನಂತರ ಬನ್ ಮತ್ತು ಮೊಟ್ಟೆ ನೀಡುವುದು ಸಂಪ್ರದಾಯ ಹಾಗೂ ಈ ಹಬ್ಬದ ವಿಶೇಷ’ ಎಂದು ಹೇಳುತ್ತಾರೆ ಕ್ರಿಶ್ಚಿಯನ್ನರು.

‘ಏಸುಕ್ರಿಸ್ತ ನಮಗಾಗಿ ಶಿಲುಬೆಯಲ್ಲಿ ಪ್ರಾಣ ಬಿಟ್ಟು, ಮೂರನೇ ದಿನ ಮತ್ತೆ ಜೀವಂತವಾಗಿ ಎದ್ದು ಬರುತ್ತಾನೆ. ಕೋಳಿ ಮರಿ ಮೊಟ್ಟೆಯೊಳಗೆ ನಿರ್ಜೀವ ಸ್ಥಿತಿಯಲ್ಲಿ ಇರುತ್ತದೆ. ಮೊಟ್ಟೆಯಿಂದ ಹೊರ ಬಂದು ಜೀವಂತವಾಗುತ್ತದೆ. ಹಾಗೆಯೇ ಏಸು ಸ್ವಾಮಿ ಜೀವಂತವಾಗಿ ಸಮಾಧಿಯಿಂದ ಹೊರ ಬಂದಿದ್ದಾರೆ ಎಂಬ ನಂಬಿಕೆ ಇದೆ’ ಎಂದುಬೇತೇಲ್ ಲೂಥರನ್ ಸಭೆ ಪ್ಯಾಸ್ಟರ್ರೆ.ಜೋಶುವಾ ಪ್ರಸನ್ನಕುಮಾರ್ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.