ADVERTISEMENT

ಚಾಮರಾಜನಗರ ಜಿಲ್ಲೆಗೆ ಬಂದ ಮೇಲೆ 2 ಬಾರಿ ಸಿಎಂ ಆದೆ: ಸಿದ್ದರಾಮಯ್ಯ

ಜಿಲ್ಲೆಗೆ ಬಂದರೆ ಅಧಿಕಾರ ಕಳೆದುಕೊಳ್ಳುವುದಿಲ್ಲ; ಸಿಗುತ್ತದೆ: ಕಾಂಗ್ರೆಸ್‌ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:26 IST
Last Updated 10 ಜುಲೈ 2024, 15:26 IST
ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು
ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು   

ಚಾಮರಾಜನಗರ: ‘ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುವುದಿಲ್ಲ. ನಾನು ಜಿಲ್ಲೆಗೆ ಬಂದುಹೋದ ಬಳಿಕವೇ ಎರಡು ಬಾರಿ ಮುಖ್ಯಮಂತ್ರಿಯಾದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ಗೌರವವನ್ನೂ ಎಂದೂ ಮರೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚಾಮರಾಜನಗರದ ಜತೆಗಿನ ಸಂಬಂಧ 40 ವರ್ಷಗಳಷ್ಟು ಹಳೆಯದಾಗಿದ್ದು ಕ್ಷೇತ್ರದ ಮತದಾರರು ಹಿಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಋಣವನ್ನು ತೀರಿಸುತ್ತೇವೆ ಎಂದು ಭರವಸೆ ನೀಡಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸುನೀಲ್ ಬೋಸ್‌ 1.88 ಲಕ್ಷ ಮತಗಳ ಅಂತರದ ಭಾರಿ ಗೆಲುವು ಸಿಗಲು ಪಕ್ಷದ ಸಂಘಟನೆ ಹಾಗೂ ಕ್ಷೇತ್ರದ ಮತದಾರರು ಪಕ್ಷದ ಮೇಲಿಟ್ಟಿರುವ ವಿಶ್ವಾಸವೂ ಪ್ರಮುಖ ಕಾರಣ ಎಂದು ಶ್ಲಾಘಿಸಿದರು.

ADVERTISEMENT

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ನೆಹರೂ ಅವಧಿಯಿಂದ ಇಲ್ಲಿಯವರೆಗೂ ಸಮಾನತೆ ತರಲು, ಅಸಮಾನತೆ ಹೋಗಲಾಡಿಸಲು ಸರ್ವರ ಪ್ರಗತಿ ಹಾಗೂ ಸಾಮರಸ್ಯಕ್ಕಾಗಿ ಶ್ರಮಿಸುತ್ತಿದೆ ಎಂದರು.

ಅಂಬೇಡ್ಕರ್ ನೀಡಿರುವ ಸಂವಿಧಾನದ ಮೂಲಕ ಸಮ ಸಮಾಜ ನಿರ್ಮಾಣ ಮಾಡುವ, ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಲಾಭ ತಲುಪಿಸಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದರೆ ಗ್ಯಾರಂಟಿಗಳ ಅನುಷ್ಠಾನ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳಿಗೂ ಅನುದಾನ ನೀಡಲಾಗಿದೆ. ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಗೆದ್ದ 25 ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾದರೂ ತುಟಿ ಬಿಚ್ಚಲಿಲ್ಲ. ಬರ ಪರಿಹಾರ ಪಡೆಯಲು ಕರ್ನಾಟಕ ಸುಪ್ರೀಂಕೋರ್ಟ್ ಬಾಗಿಲು ತಟ್ಟಬೇಕಾಯಿತು. ಬಳಿಕ ಛೀಮಾರಿ ಹಾಕಿಸಿಕೊಂಡ ಕೇಂದ್ರ ಪರಿಹಾರ ಬಿಡುಗಡೆ ಮಾಡಿತು. ಈ ಬಾರಿಯಾದರೂ ರಾಜ್ಯದ ಪರವಾಗಿ ಹೋರಾಟ ಮುಂದುವರಿಸುವಂತೆ ನೂತನ 28 ಸಂಸದರಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಜವಾಗಿಯೂ ಸೋತಿರುವುದು ಬಿಜೆಪಿ. ಕಾಂಗ್ರೆಸ್‌ಗೆ ಶೇ 13ರಷ್ಟು ಹೆಚ್ಚು ಮತಗಳು ಬಂದಿದ್ದು ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳು ಸಿಕ್ಕಿವೆ. ಬಿಜೆಪಿ 303 ಸ್ಥಾನಗಳಿಂದ 240ಕ್ಕೆ ಕುಸಿದಿದೆ ಎಂದರು.

ವಸತಿ ಸಚಿವ ಜಮೀರ್ ಅಹಮದ್ ಖಾನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್‌, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಸ್ವಾಮಿ, ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯ್‌ ಕುಮಾರ್‌, ಶಾಸಕರಾದ ಕೃಷ್ಣಮೂರ್ತಿ, ಅನಿಲ್, ಚಿಕ್ಕಮಾದು, ಮಾಜಿ ಶಾಸಕರಾದ ನರೇಂದ್ರ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಮುನ್ನ, ಮಾಜಿ ಸಚಿವ ಎಂ.ಶಿವಣ್ಣ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು ಇದ್ದರು.

ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಕೃತಜ್ಞತಾ ಸಮಾವೇಶದಲ್ಲಿ ಪ್ರಜಾವಾಣಿ ಪತ್ರಿಕೆ ಓದುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೃತಜ್ಞತಾ ಸಮಾವೇಶದಲ್ಲಿ ಕಾರ್ಯಕರ್ತರ ದಂಡು ಮೂರು ತಾಸು ತಡವಾಗಿ ಆರಂಭವಾದ ಕಾರ್ಯಕ್ರಮ ಗ್ರಾಮೀಣ ಭಾಗದ ಬಸ್‌ಗಳಲ್ಲಿ ಜನದಟ್ಟಣೆ

‘ಒಂದು ವರ್ಷ ಸಮಯ ಕೊಡಿ’ ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲಿಸಿರುವ ಮತದಾರರು ರಾಜಕೀಯ ಎಂಬ ಶಾಲೆಗೆ ದಾಖಲಾತಿ ಮಾಡಿಸಿದ್ದಾರೆ. ಪರೀಕ್ಷೆ ಮುಗಿದು ಫಲಿತಾಂಶ ಬರುವವರೆಗೂ ಒಂದು ವರ್ಷವಾದರೂ ಸಮಯಾವಕಾಶ ಕೊಡಿ. ಕ್ಷೇತ್ರದ ಜನರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಹಿರಿಯ ನಾಯಕರು ಕ್ಷೇತ್ರದ ಶಾಸಕರ ಜತೆಗೂಡಿ ಚಾಮರಾಜನಗರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ. ಸುನೀಲ್ ಬೋಸ್‌ ಚಾಮರಾಜನಗರ ಕ್ಷೇತ್ರದ ಸಂಸದ

‘ಉದ್ಯೋಗ ಸೃಷ್ಟಿಗೆ ಒತ್ತು’ ನಂಜುಡಪ್ಪ ವರದಿಯ ಪ್ರಕಾರ ಅತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತು ನೀಡಿದ್ದಾರೆ. ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಗ್ರಾಮೀಣ ಭಾಗಗಳ ಅಭಿವೃದ್ಧಿ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಜಾರಿಗೆ ಆದ್ಯತೆ ನೀಡಿದ್ದಾರೆ. –ಎ.ಆರ್‌.ಕೃಷ್ಣಮೂರ್ತಿ ಕೊಳ್ಳೇಗಾಲ ಶಾಸಕ

‘ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿ’ ಪ್ರತಿ ಲೋಕಸಭಾ ಚುನಾವಣೆಗಳಲ್ಲಿ ಚಾಮರಾಜನಗರ ವಿಧಾಣಸಭಾ ಕ್ಷೇತ್ರದಿಂದ ಕಾಂಗ್ರೆಸ್‌ಗೆ ಮೂರ್ನಾಲ್ಕು ಸಾವಿರ ಮತಗಳ ಲೀಡ್‌ ಮಾತ್ರ ದೊರೆಯುತ್ತಿತ್ತು. ಈ ಬಾರಿ 20000ಕ್ಕೂ ಹೆಚ್ಚು ಮತಗಳು ಸಿಕ್ಕಿವೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಬಲ ಹೆಚ್ಚಲು ಕಾರಣವಾಗಿದ್ದು ಕ್ಷೇತ್ರದಲ್ಲಿ ಬಾಕಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಬೇಕು. –ಪುಟ್ಟರಂಗ ಶೆಟ್ಟಿ ಚಾಮರಾಜನಗರ ಕ್ಷೇತ್ರದ ಶಾಸಕ

ದೊಡ್ಡ ಜವಾಬ್ದಾರಿ ಮೇಲಿದೆ’ ನೂತನ ಸಂಸದ ಸುನೀಲ್ ಬೋಸ್‌ ಅಭಿವೃದ್ಧಿ ಕಾರ್ಯಗಳ ಮೂಲಕ ಜನಪರ ನಿಲುವು ತೆಗೆದುಕೊಳ್ಳುವ ಮೂಲಕ ಯೋಜನೆಗಳ ಅನುಷ್ಠಾನಗಳ ಮೂಲಕ ಬಿಜೆಪಿ ಅಪಪ್ರಚಾರಗಳಿಗೆ ತಕ್ಕ ಉತ್ತರ ನೀಡಬೇಕು. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಂದು ತಿಂಗಳ ಅವಧಿಯಲ್ಲಿ ವಸತಿ ನಿಲಯಗಳ ಸ್ಥಾಪನೆಗೆ ಭವನಗಳ ನಿರ್ಮಾಣಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ ಸಮಾಜಕಲ್ಯಾಣ ಇಲಾಖೆಯಿಂದ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮತದಾರರು ಭಾರಿ ಮತಗಳ ಅಂತರದ ಗೆಲುವು ನೀಡಿರುವುದು ಜವಾಬ್ದಾರಿ ಹೆಚ್ಚಿಸಿದೆ. –ಎಚ್‌.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.