ADVERTISEMENT

ಯಳಂದೂರು: ನಾಟಿ ಬಟಾಣಿ ಬಿತ್ತನೆಗೆ ರೈತರ ಒಲವು

ಸೋನೆ ಮಳೆಯ ನಡುವೆ ಬಿತ್ತನೆಗೆ ಭೂಮಿ ಸಿದ್ಧಪಡಿಸುತ್ತಿರುವ ಕೃಷಿಕರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:00 IST
Last Updated 14 ಜುಲೈ 2024, 16:00 IST
ಯಳಂದೂರು ತಾಲ್ಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ನಾಟಿ ಬಟಾಣಿ ಬಿತ್ತನೆಯಲ್ಲಿ ತೊಡಗಿರುವ ಕೃಷಿಕ ಮಹಿಳೆಯರು
ಯಳಂದೂರು ತಾಲ್ಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ನಾಟಿ ಬಟಾಣಿ ಬಿತ್ತನೆಯಲ್ಲಿ ತೊಡಗಿರುವ ಕೃಷಿಕ ಮಹಿಳೆಯರು   

ಯಳಂದೂರು: ತಾಲ್ಲೂಕಿನಲ್ಲಿ ಪುನರ್ವಸು ಇನ್ನೂ ಅಬ್ಬರಿಸಿಲ್ಲ. ಭೂಮಿಯಲ್ಲಿ ತೇವಾಂಶ ಹೆಚ್ಚಿಲ್ಲ. ಸೋನೆ ಮಳೆ ಸಿಂಚನ ನಿಂತಿಲ್ಲ. ಈ ನಡುವೆ ರೈತರು ಕೃಷಿಗೆ ಭೂಮಿ ಸಿದ್ಧಪಡಿಸುವ ಕಾಯಕ ಮುಂದುವರಿಸಿದ್ದು, ಅಲ್ಪಾವಧಿ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ವಿಶೇಷವಾಗಿ ವರ್ಷಪೂರ್ತಿ ಬೇಡಿಕೆ ಇರುವ ನಾಟಿ ಬಟಾಣಿ ಬಿತ್ತನೆಗೆ ಹೊಲ ಸಿದ್ಧಪಡಿಸುವ ಕೆಲಸ ನಡೆದಿದೆ.

ಜುಲೈನಲ್ಲಿ ಮಳೆ ಸುರಿದರೆ ಕಬ್ಬು, ಭತ್ತ, ಜೋಳ ಬಿತ್ತನೆ ವೇಗ ಪಡೆಯುತ್ತದೆ. ನದಿ, ಕಾಲುವೆ ನೀರು ಹರಿದರೆ ಸಾಂಪ್ರದಾಯಿಕ ಕೃಷಿಗೆ ಒತ್ತು ಸಿಗಲಿದೆ. ಆದರೆ, ಮಳೆಯ ಏರುಪೇರು ಕೃಷಿಕರನ್ನು ಪರ್ಯಾಯ ಬೆಳೆಗಳತ್ತ ನೋಡುವಂತೆ ಮಾಡಿದೆ. ಪರಿಣಾಮ, ಹೈಬ್ರಿಡ್ ತಳಿಯ ಬಟಾಣಿ, ಅವರೆ ನಾಟಿ ಜನಪ್ರಿಯತೆ ಪಡೆಯುತ್ತಿದೆ.

‘ತರಕಾರಿ ಮತ್ತು ದ್ವಿದಳಧಾನ್ಯ ಬೆಳೆಗಳಾಗಿ ಗುರುತಿಸಿರುವ ನಾಟಿ ಬಟಾಣಿಗೆ ವರ್ಷಪೂರ್ತಿ ಬೇಡಿಕೆ ಇದೆ. ಬೆಲೆಯೂ ಹೆಚ್ಚು. ಹಾಗಾಗಿ, ಬಾನ್ ಎಲ್ಲೆ, ಅರ್ಲಿ ಬ್ಯಾಡರ್, ಅರ್ಕಾ ಅಜಿತ್, ಕಾರ್ತಿಕ, ಆರ್ಕೆಲ್, ಸಂಪೂರ್ಣ, ಪ್ರಿಯ, ಪ್ರಮೋದ್ ಮೊದಲಾದ ತಳಿಗಳಿಗೆ ಬೇಡಿಕೆ ಇದೆ. ಈ ತಳಿಗಳೂ ಉತ್ತಮ ಇಳುವರಿ ಕೊಡುವುದರ ಜೊತೆಗೆ 120 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. 15 ರಿಂದ 20 ಬಾರಿ ಕಟಾವು ಮಾಡಬಹುದು’ ಎನ್ನುತ್ತಾರೆ ರೈತ ಮಲಾರಪಾಳ್ಯ ಶಿವಣ್ಣ.

ADVERTISEMENT

ಭೂಮಿಗೆ ಸಾರಜನಕ: ಜುಲೈ-ಆಗಸ್ಟ್ ನಡುವೆ ನಾಟಿ ಬಟಾಣಿ, ಮಳೆ ಅವರೆ ಮತ್ತು ಊಟಿ ಬೀನ್ಸ್ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು. ನೀರು ಬಸಿದು ಹೋಗುವ ಕಪ್ಪುಗೋಡು ಮತ್ತು ಕೆಂಪು ಮಣ್ಣು ಈ ಬೆಳೆಗಳಿಗೆ ಸೂಕ್ತವಾಗಿದೆ. 

ಈಚಿನ ದಿನಗಳಲ್ಲಿ ರೈತರು ಊಟಿ ಬಟಾಣಿ, ಲಕ್ಕೂರು ಬಟಾಣಿ, ದಾಬಾಸ್ ಪೇಟ್ ಬಟಾಣಿ ನಾಟಿಗೆ ಒಲವು ತೋರುತ್ತಿದ್ದಾರೆ. ಹಟ್ಟಿ ಗೊಬ್ಬರ ನೀಡಿ, ಉತ್ತಮ ನಿರ್ವಹಣೆ ಮಾಡಿದರೆ ಹೆಚ್ಚಿನ ವರಮಾನ ಪಡೆಯಬಹುದು. ಇವು ದ್ವಿದಳಧಾನ್ಯ ಬೆಳೆ ಆಗಿರುವುದರಿಂದ ಭೂ ಫಲತ್ತತೆ ಹೆಚ್ಚಳದ ಜೊತೆಗೆ ಸಾರಜನಕ ಸ್ಥಿರೀಕರಣವೂ ಆಗಲಿದೆ ಎಂದು ಗೂಳಿಪುರ ಕೃಷಿಕ ಜಯಣ್ಣ ಹೇಳಿದರು.

ರೈತರಿಗೆ ಬಿತ್ತನೆ ಭತ್ತ ವಿತರಣೆ: ಗುರುವಾರ ರೈತರಿಗೆ ನಾಟಿ ಭತ್ತ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ಐಆರ್ 64, ಜ್ಯೋತಿ, ಆಎನ್‌ಆರ್ ಹಾಗೂ ಎಂಟಿಯೂ-1010 ಭತ್ತದ ತಳಿಗಳನ್ನು ಕಸಬಾ ಮತ್ತು ಅಗರ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. 25 ಕೆಜಿ ಬ್ಯಾಗ್‌ಗೆ ಸಾಮಾನ್ಯ ವರ್ಗದ ಕೃಷಿಕರಿಗೆ ₹ 200 ಮತ್ತು ಪರಿಶಿಷ್ಟ ವರ್ಗದ ಕೃಷಿಕರಿಗೆ ₹ 300 ಸಹಾಯಧನ ಸಿಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.